ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಸರಿಯಾದ ಚಿಕಿತ್ಸೆ ಸೇರಿದಂತೆ ಅನೇಕ ಸೌಲಭ್ಯಗಳು ದೊರೆಯುತ್ತಿಲ್ಲ ಎಂಬ ದೂರುಗಳು ಕೇಳಿ ಬರ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಬೌರಿಂಗ್ ಲೇಡಿ ಕರ್ಜನ್ ಆಸ್ಪತ್ರೆಗೆ ಹೈ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ವೀರಪ್ಪ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಸರಿಯಾಗಿ ಕ್ಲಾಸ್ ತೆಗೆದುಕೊಂಡರು.
ಆಸ್ಪತ್ರೆಯಲ್ಲಿನ ಸ್ವಚ್ಛತೆ ಹಾಗೂ ಸಿಬ್ಬಂದಿ ಹಾಜರಾತಿ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಪರಿಶೀಲನೆ ನಡೆಸಿದ್ರು. ಆಸ್ಪತ್ರೆಗೆ ಸರಿಯಾದ ಸಮಯಕ್ಕೆ ಬಾರದ ವೈದ್ಯರ ಬಗ್ಗೆ ಹಾಜರಾತಿ ಚೆಕ್ ಮಾಡಿ ಆವರಣದಲ್ಲಿ ಬಿದ್ದಿದ್ದ ಕಸವನ್ನು ಕಂಡು ಗರಂ ಆದರು. ಆಸ್ಪತ್ರೆಯಲ್ಲಿ ಸರಿಯಾದ ರೀತಿ ರೋಗಿಗಳಿಗೆ ಸೇವೆ ಸಿಗುತ್ತಿದ್ಯಾ ಅನ್ನುವ ಬಗ್ಗೆ ಪರಿಶೀಲನೆ ನಡೆಸಿದ್ರು.
ಒಳಗಡೆ ಬಿದ್ದಿದ್ದ ಕಸವನ್ನು ಕಂಡು ಪೊರಕೆ ಕೊಡಿ, ನಾನೇ ಕ್ಲೀನ್ ಮಾಡುತ್ತೇನೆ ಎಂದು ತರಾಟೆಗೆ ತೆಗೆದುಕೊಂಡರು. ಸರ್ಕಾರಿ ಆಸ್ಪತ್ರೆಗಳಿಗೆ ಸರ್ಕಾರದಿಂದ ಕೋಟ್ಯಾಂತರ ರೂಪಾಯಿ ಹಣ ಬರುತ್ತೆ. ಆದ್ರೆ ಇಲ್ಲಿನ ಚಿಕಿತ್ಸೆ ಸೇರಿದಂತೆ ರೋಗಿಗಳ ಆರೈಕೆಗಳು, ಔಷಧಿಗಳು ಯಾವುದು ಕೂಡ ಸರಿಯಾಗಿ ನೀಡದೆ ಇರೋದು ಕಂಡು ಬರುತ್ತಿದೆ. ಹೀಗೆ ಆದ್ರೆ ಜನಕ್ಕೆ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ನಂಬಿಕೆ ಬರೋದಿಲ್ಲ ಎಂದ್ರು. ಅಲ್ಲದೇ ಈಗಾಗಲೇ ಬಹಳಷ್ಟು ದೂರುಗಳು ಬಂದಿವೆ. ಸುಮಾರು 750 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯಲ್ಲಿ ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರಿಯಾದ ಚಿಕಿತ್ಸೆ ನೀಡಿದ್ರೆ ಜನ ಕೂಡ ಬರ್ತಾರೆ. ಇಲ್ಲ ಅಂದ್ರೆ ಯಾರು ಕೂಡ ಇತ್ತ ಸುಳಿಯೋದಿಲ್ಲ ಎಂದರು.
ಇನ್ನೂ ಆಸ್ಪತ್ರೆ ಅವ್ಯವಸ್ಥೆ ಕುರಿತು ಗರಂ ಆದ ನ್ಯಾಯಧೀಶರು, ಇಲ್ಲಿ ಯಾರು ಯಜಮಾನರು ಅಂತಾನೆ ಗೊತ್ತಿಲ್ಲ. ನಾವೇ ಹುಡುಕ್ತೀವಿ. ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡುವ ಎಚ್ಚರಿಕೆಯನ್ನು ರವಾನಿಸಿದ್ರು. ಒಟ್ಟಿನಲ್ಲಿ ಆಗಾಗೆ ಇಂತಹ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ರೆ, ಸರ್ಕಾರಿ ಆಸ್ಪತ್ರೆಯಲ್ಲಿ ಬಡಜನರಿಗೆ ದೊರೆಯುವ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತೆ. ಜೊತೆಗೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುವ ನಿರೀಕ್ಷೆ ಇದೆ.
PublicNext
08/10/2022 07:56 pm