ಬೆಂಗಳೂರು: ಖಾಸಗಿ ಕಂಪನಿಗಳಲ್ಲಿ ವಾಹನ ವಿಮೆ ಮಾಡಿಸುವ ಗ್ರಾಹಕರೇ ಎಚ್ಚರವಾಗಿರಿ. ಫೋರ್ ವ್ಹೀಲರ್ ಗೆ ವಿಮೆ ಮಾಡಿಸಿದ್ರೆ ನಿಮ್ಮ ವಾಹನಕ್ಕೆ ಟು ವ್ಹೀಲರ್ ವಿಮೆ ಕಟ್ಟಿರುತ್ತಾರೆ. ಬೆಂಗಳೂರಿನಲ್ಲಿ ಇಂತಹ ಅಕ್ರಮ ವಿಮೆ ಬದಲಾಯಿಸುವ ಬೃಹತ್ ಜಾಲವಿರುವುದು ಬೆಳಕಿಗೆ ಬಂದಿದೆ.
ಇನ್ಸೂರೆನ್ಸ್ ಪಾವತಿಯಾದ ತಕ್ಷಣ ಆರ್ ಟಿಒ ಆನ್ಲೈನ್ ದಾಖಲೆಯಲ್ಲಿ ಇನ್ಸೂರೆನ್ಸ್ ಅವಧಿಯ ದಿನಾಂಕ ಅಪ್ ಡೇಟ್ ಆಗುತ್ತೆ. ಆದರೆ, ಯಾವ ಮೊತ್ತದ ಇನ್ಸೂರೆನ್ಸ್ ಎಂಬುದು ಪತ್ತೆಯಾಗಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಕಮರ್ಷಿಯಲ್ ಕಾರುಗಳಿಗೆ ಬೈಕ್ ಇನ್ಸೂರೆನ್ಸ್ ಪಾವತಿ ಮಾಡುತ್ತಿದ್ದ ಆರೋಪಿ ಇರ್ಫಾನ್ ಶೇಖ್ ಎಂಬಾತನನ್ನ ಬಂಧಿಸಲಾಗಿದೆ. ಅಪಘಾತ ಆಗಿ ಇನ್ಸೂರೆನ್ಸ್ ಕ್ಲೇಮ್ ಗೆ ಹೋದಾಗ ಈತನ ಮೋಸ ಬೆಳಕಿಗೆ ಬಂದಿದೆ.
Acko General insurance ಎಂಬ ಖಾಸಗಿ ವಿಮಾ ಕಂಪನಿಗೆ ಇದುವರೆಗೂ ಎರಡು ಕೋಟಿ ಮೌಲ್ಯದ ನಕಲಿ ವಿಮೆ ಮಾಡಿಸಿರುವುದು ಪತ್ತೆಯಾಗಿದ್ದು, Acko General insurance ಕಂಪನಿ ಸೆನ್ ಠಾಣೆಗೆ ದೂರು ನೀಡಿತ್ತು. ದೂರಿನನ್ವಯ ಬಂಧಿಸಿರೋ ಆರೋಪಿ ಇರ್ಫಾನ್ ಶೇಖ್ ನನ್ನು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
2020 ರ ಕೋವಿಡ್ ಸಮಯದಲ್ಲಿ ಎರಡೂವರೆ ಲಕ್ಷ ಕಾರುಗಳನ್ನು ಓಲಾ ಕಂಪನಿ ಚಾಲಕರು ಇಲ್ಲದೆ ಕಾರುಗಳನ್ನು ಮಾರಾಟ ಮಾಡಿತ್ತು. ಒಂದು ವರ್ಷಕ್ಕೂ ಅಧಿಕ ಕಾಲ ವಾಹನಗಳು ನಿಂತಿದ್ದು, ಇನ್ಸೂರೆನ್ಸ್ ಮುಗಿದಿದ್ದ ವಾಹನಗಳನ್ನು ಮಾರಾಟ ಮಾಡಲಾಗಿತ್ತು.
ಅದರಲ್ಲಿ ಆರೋಪಿ ಇರ್ಫಾನ್ ಸಂಪರ್ಕದಲ್ಲಿದ್ದ ಹಲವರು ಓಲಾ ಕಂಪನಿಯಿಂದ 200ಕ್ಕೂ ಅಧಿಕ ಕಾರುಗಳನ್ನು ಖರೀದಿಸಿದ್ದರು. ಇದೇ ಕಾರುಗಳಿಗೆ ಇರ್ಫಾನ್ ಇನ್ಸೂರೆನ್ಸ್ ಮಾಡಿಸಿರುವುದು ಪತ್ತೆಯಾಗಿದೆ. ರಾಜಸ್ಥಾನ, ದೆಹಲಿ, ಮುಂಬೈ, ಜಾರ್ಖಂಡ್, ಉತ್ತರಪ್ರದೇಶ ಸೇರಿ ಹಲವು ರಾಜ್ಯದಲ್ಲಿ ಇದೇ ರೀತಿ ಕೃತ್ಯವೆಸಗಲಾಗಿದೆ. ಸದ್ಯ ವಂಚನೆ ಜಾಲ ಭಾರತದಾದ್ಯಂತ ಹಬ್ಬಿರುವ ಶಂಕೆ ವ್ಯಕ್ತವಾಗಿದೆ. ಇದೇ ಕಾರಣಕ್ಕೆ ಆಗ್ನೇಯ ಸೆನ್ ಪೊಲೀಸರು ಇರ್ಫಾನ್ ನ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
PublicNext
20/09/2022 04:21 pm