ಬೆಂಗಳೂರು: ಇತ್ತೀಚೆಗೆ ರಾಜಧಾನಿಯಲ್ಲಿ ನಡೆದಿದ್ದ ಸೈಮಾ ಅವಾರ್ಡ್ ಕಾರ್ಯಕ್ರಮ ಹಿನ್ನೆಲೆ ಪಂಚತಾರಾ ಹೋಟೆಲ್ ನಲ್ಲಿ ತಡರಾತ್ರಿವರೆಗೂ ಪಾರ್ಟಿ ಮಾಡಿದ ಆರೋಪದಡಿ ಹೊಟೇಲ್ ಮ್ಯಾನೇಜರ್ ಹಾಗೂ ಪಾರ್ಟಿ ಆಯೋಜಕರ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಇದೇ ತಿಂಗಳು 12ರಂದು ನಗರದ ಅರಮನೆ ಮೈದಾನದಲ್ಲಿ ದಕ್ಷಿಣ ಭಾರತದ ಚಿತ್ರರಂಗದ ಪ್ರತಿಷ್ಠಿತ ಸೈಮಾ ಅವಾರ್ಡ್ ಕಾರ್ಯಕ್ರಮ ನಡೆದಿತ್ತು. ಚಿತ್ರರಂಗದ ಗಣ್ಯರು ಭಾಗಿಯಾಗಿದ್ದರು. ಅಲ್ಲದೆ ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಜೆಡಬ್ಲ್ಯೂ ಮ್ಯಾರಿಯೇಟ್ ಹೋಟೆಲ್ ಉಳಿದುಕೊಂಡಿದ್ದರು. ಅದೇ ದಿನ ರಾತ್ರಿ ಹೊಟೇಲ್ ನಲ್ಲಿ ಅವಧಿ ಮೀರಿ ಪಾರ್ಟಿ ಮಾಡಿರುವುದು ಕಂಡುಬಂದಿದೆ. ಮಧ್ಯರಾತ್ರಿ 3.30ರವರೆಗೂ ಪಾರ್ಟಿ ಮಾಡಿದ್ದಾರೆ. ಪಾರ್ಟಿಯಲ್ಲಿ ಚಲನಚಿತ್ರರಂಗದವರು ಭಾಗಿಯಾಗಿರುವ ಶಂಕೆಯಿದೆ. ನಿಗದಿ ಅವಧಿ ಮೀರಿ ಪಾರ್ಟಿ ಮಾಡಿ ಕಾನೂನುಬಾಹಿರವಾಗಿ ನಡೆದುಕೊಂಡಿದ್ದ ಹೊಟೇಲ್ ಮ್ಯಾನೇಜರ್ ಹಾಗೂ ಆರ್ಗನೈಜರ್ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸರು ಸ್ವಯಂಪ್ರೇರಿತವಾಗಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
PublicNext
21/09/2022 04:03 pm