ಬೆಂಗಳೂರು: ವಿದ್ಯಾರ್ಥಿನಿಯರಿಬ್ಬರು ದಕ್ಷಿಣ ಪಿನಾಕಿನಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಹೊಸಕೋಟೆ ತಾಲ್ಲೂಕಿನ ಅನುಗೊಂಡನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ ತಿರುವರಂಗ ಬಳಿ ನಡೆದಿದೆ.
ಬಾಗೂರು ಗ್ರಾಮದ ಕು.ರಾಜೇಶ್ವರಿ (17) ಹಾಗೂ ಮಾಲೂರು ತಾಲೂಕು ಲಕ್ಕೂರು ಬಳಿಯ ಪುರ ಗ್ರಾಮದ ಸುಪ್ರಿಯಾ (18) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಕಾಲೇಜು ಮುಗಿಸಿ ಬಂದ ಇಬ್ಬರೂ ಸಂಜೆ 5 ಗಂಟೆಗೆ ನದಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆ ಗಮನಿಸಿದ ಸ್ಥಳೀಯರು ಅನುಗೊಂಡನಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಿದ್ದು, ಜನರ ನೆರವಿನಿಂದ ಮೃತ ರಾಜೇಶ್ವರಿ ಶವ ಪತ್ತೆ ಮಾಡಲಾಗಿದೆ. ಇನ್ನು ಲಕ್ಕೂರು ಗ್ರಾಮದ ಸುಪ್ರಿಯಾ ಶವ ಪತ್ತೆಯಾಗಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಶವಪತ್ತೆಗೆ ತೀವ್ರ ಹುಡುಕಾಟ ನಡೆಸಿದ್ದಾರೆ. ರಾತ್ರಿಯಾದ ಕಾರಣ ಶವಪತ್ತೆ ಕಾರ್ಯ ಸ್ಥಗಿತಗೊಳಿಸಿದ್ದು, ನಾಳೆ ಹುಡುಕಾಟ ನಡೆಸಲಿದ್ದಾರೆ. ಮೃತರ ಶವವನ್ನು ವೈದೇಹಿ ಆಸ್ಪತ್ರೆಗೆ ರವಾನಿಸಿಲಾಗಿದೆ.
ಮೊಬೈಲ್ ಫೋನ್ ವಿಚಾರವಾಗಿ ಪೋಷಕರು ನಿಂದನೆ ಮಾಡಿದ್ದಾರೆ ಎಂದು ಮನನೊಂದು ಬಾಲಿಯರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮೃತರು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಲಕ್ಕೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ವರ್ಷದ PUC (ಆರ್ಟ್ಸ್) ವ್ಯಾಸಂಗ ಮಾಡುತ್ತಿದ್ದರು. ಪರಸ್ಪರ ಆತ್ಮೀಯ ಸ್ನೇಹಿತರಾಗಿದ್ದರು ಎನ್ನಲಾಗಿದೆ. ಈ ಬಗ್ಗೆ ಅನುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಹೊಸಕೋಟೆ..
PublicNext
26/07/2022 10:47 pm