ದೊಡ್ಡಬಳ್ಳಾಪುರ: ಕಟ್ಟಡ ಕಾಮಗಾರಿ ವೇಳೆ ಗೋಡೆ ಕುಸಿದು ಕೂಲಿ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಕಟ್ಟಡ ಮಾಲೀಕ ಪರಾರಿಯಾಗಿದ್ದು, ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೊಡ್ಡಬಳ್ಳಾಪುರ ನಗರದ ಹಳೇ ಮಾರುಕಟ್ಟೆ ಬಳಿ ವಿನಯ್ ಎಂಬುವರು ಕಟ್ಟಡ ನಿರ್ಮಾಣ ಮಾಡುತ್ತಿದ್ದರು. ಕಟ್ಟಡ ನಿರ್ಮಾಣದ ವೇಳೆ ಗೋಡೆ ಕುಸಿದು 45 ವರ್ಷದ ನಾಗರಾಜು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 40 ವರ್ಷದ ಶೇಖರ್ ಮತ್ತು 40 ವರ್ಷದ ಕಮಲಮ್ಮ ಗಂಭೀರ ಗಾಯಗೊಂಡಿದ್ದು ಚಿಕಿತ್ಸೆಗಾಗಿ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.
ಮೃತ ನಾಗರಾಜು ದೇವನಹಳ್ಳಿ ತಾಲೂಕಿನ ಗೋಕರೆ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. ಮೇಸ್ತ್ರಿ ವಿನಯ್ ಬಳಿ ಗಾರೆ ಕೆಲಸ ಮಾಡುತ್ತಿದ್ದರು. ಮೃತ ನಾಗರಾಜ್ ಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ..
ಇನ್ನು ಕಟ್ಟಡ ಕಟ್ಟುವಾಗ ಯಾವುದೇ ಸುರಕ್ಷತಾ ಕ್ರಮ ತೆಗೆದು ಕೊಳ್ಳದಿರುವುದು ಅವಘಡಕ್ಕೆ ಕಾರಣವಾಗಿದೆ. ಸರ್ಕಾರದ ನಿಯಮ ಗಾಳಿಗೆ ತೂರಿ ಕಟ್ಟಡ ಮಾಲೀಕ ಕಿಶೋರ್ ಮತ್ತು ಮೇಸ್ತ್ರಿ ವಿನಯ್ ಕಟ್ಟಡ ನಿರ್ಮಾಣ ಮಾಡುತ್ತಿದ್ದರು ಎನ್ನಲಾಗಿದೆ.. ಕಡಿಮೆ ಕೂಲಿಗೆ ಕಾರ್ಮಿಕರು ಸಿಗುತ್ತಾರೆಂಬ ಕಾರಣಕ್ಕೆ ಹೊರ ಊರಿನ ಕಾರ್ಮಿಕರನ್ನ ಕೆಲಸಕ್ಕೆ ಕರೆಯುತ್ತಾರೆ. ಕಟ್ಟಡ ನಿರ್ಮಾಣದ ವೇಳೆ ಅವಘಡ ಸಂಭವಿಸಿದ್ದಾಗ ಕಾರ್ಡ್ ಇಲ್ಲದವರಿಗೆ ಸರ್ಕಾರದಿಂದ ಪರಿಹಾರ ಸಿಗುವುದಿಲ್ಲ. ಹೀಗಾಗಿ ಕಾರ್ಡ್ ಇಲ್ಲದ ಕಾರ್ಮಿಕರಿಗೆ ಲೇಬರ್ ಕಾರ್ಡ್ ಮಾಡಿಸುವಂತೆ ಕಟ್ಟಡ ಕೂಲಿ ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷ ಆನಂದ್ ಕುಮಾರ್ ಒತ್ತಾಯಿಸಿದರು.
ಇನ್ನು ಘಟನೆಗೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೇಸ್ತ್ರಿ ವಿನಯ್ ನನ್ನ ಬಂಧಿಸಲಾಗಿದೆ. ಕಟ್ಟಡ ಮಾಲೀಕ ಪರಾರಿಯಾಗಿದ್ದಾನೆ.
PublicNext
12/07/2022 04:50 pm