ನೆಲಮಂಗಲ: ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಜೋರು ಮಳೆಗೆ ಕೆರೆಕಟ್ಟೆಗಳೆಲ್ಲ ಮೈದುಂಬಿ ಹರಿಯುತ್ತಿವೆ. ಕೆರೆ ಕೋಡಿ ಹರಿಯುವ ರಭಸಕ್ಕೆ ಸಿಲುಕಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನೆಲಮಂಗಲ ತಾಲ್ಲೂಕಿನ ದೇವರಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ದೇವರಹೊಸಹಳ್ಳಿ ಗ್ರಾಮದ 50 ವರ್ಷ ವಯಸ್ಸಿನ ವೀರಭದ್ರಪ್ಪ ಸಾವನ್ನಪ್ಪಿದ ವ್ಯಕ್ತಿ. ಬುಧವಾರ ರಾತ್ರಿ ವೇಳೆ ದೇವರಹೊಸಹಳ್ಳಿ ಗ್ರಾಮದ ಮೋಹನ್, ಬಸವರಾಜು ಹಾಗೂ ವೀರಭದ್ರಪ್ಪ ಮೂವರು ಸೆಲಿರಿಯೋ ಕಾರಿನಲ್ಲಿ ಊರಿಗೆ ತೆರಳುತ್ತಿದ್ದರು. ಈ ವೇಳೆ ಕರೆಯ ಕೋಡಿ ತುಂಬಿ ರಸ್ತೆಯ ಮೇಲೆ ನೀರು ಬೋರ್ಗರೆದು ಹರಿಯುತ್ತಿತ್ತು. ಇದೇ ಮಾರ್ಗವಾಗಿ ಬಂದ ಕಾರು ನೀರಿನಲ್ಲಿ ಕೊಚ್ಚಿ ಹೋಗಿದೆ. ಪರಿಣಾಮ ಕಾರಿನಲ್ಲಿದ್ದ ಮೂವರು ಕಾರಿನಿಂದ ಹೊರ ಜಿಗಿದಿದ್ದಾರೆ. ಅದರಲ್ಲಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು, ವೀರಭದ್ರಪ್ಪ ಮಾತ್ರ ನೀರಿನ ರಭಸಕ್ಕೆ ಸಿಲುಕಿ ಕೊನೆಯುಸಿರೆಳೆದಿದ್ದಾರೆ.
ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಡಾಬಸ್‌ಪೇಟೆ ಪೊಲೀಸರು ಮೃತದೇಹವನ್ನು ಹೊರತಗೆದು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಜಿಲ್ಲಾಧಿಕಾರಿ ಶ್ರೀನಿವಾಸ್, ತಹಶೀಲ್ದಾರ್ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಡಾಬಸ್ ಪೇಟೆ ಠಾಣಾ ಪೊಲೀಸ್ರು ತನಿಖೆ ಆರಂಭಿಸಿದ್ದಾರೆ.
PublicNext
20/05/2022 11:31 am