ನೆಲಮಂಗಲ: ಟ್ರ‍್ಯಾಕ್ಟರ್ ಹಿಂಬದಿಯಿಂದ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ ರಾ.ಹೆ. ಬದಿಯ ವಿಭಜಕದ ಗಿಡಗಳಿಗೆ ನೀರಾಯಿಸುತ್ತಿದ್ದ ಟೋಲ್ ನ ಮಹಿಳಾ ಸಿಬ್ಬಂದಿಗೆ ಡಿಕ್ಕಿ ಹೊಡೆದಿದ್ದರಿಂದ ಮಹಿಳೆ ಸ್ಥಳದಲ್ಲೇ ಮೃತ ಪಟ್ಟಿದ್ದು, ಬಳಿಕ ಸರ್ವೀಸ್ ರಸ್ತೆಗೆ ನುಗ್ಗಿದ ಬಸ್ ನ 7 ಮಂದಿ ಪ್ರಯಾಣಿಕರೂ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ನೆಲಮಂಗಲ ತಾಲ್ಲೂಕು ಕುಣಿಗಲ್ ರಸ್ತೆಯ ಯಂಟಗಾನಹಳ್ಳಿ ಬಳಿ ಮಹಾದೇವಪುರದ ಸಮೀಪ ಈ ಅಪಘಾತ ಸಂಭವಿಸಿದ್ದು, ತಾಲ್ಲೂಕಿನ ಗುರುವನಹಳ್ಳಿ ಗ್ರಾಮದ ಶೋಭಾ (26) ಮೃತಪಟ್ಟವರು. ತಾಲೂಕಿನ ಶ್ರೀನಿವಾಸಪುರ ನಿವಾಸಿ ಹನುಮಂತರಾಜು (45) ಟ್ಯಾಕ್ಟರ್ ಚಾಲಕ. ಕುಂದಾಪುರದ ಹುಣಸೆಪೆಟ್ಟ ನಿವಾಸಿ ಸುನಿಲ್ (22), ಬೇಲೂರಿನ ಬೆಟ್ಟದಹಳ್ಳಿಯ ಜೈಲುದ್ದೀನ್ (65), ಹುಸೇನಬೀ (60), ಕಮಲುದ್ದೀನ್ (55) ಬಸ್ ಪ್ರಯಾಣಿಕರು ಹಾಗೂ ಬಸ್ ಚಾಲಕ ಲಿಂಗರಾಜು (42) ಮತ್ತು ನಿರ್ವಾಹಕ ದೇವರಾಜು ( 43) ಗಾಯಾಳುಗಳು.
ಇಂದು ಮಧ್ಯಾಹ್ನ ಹಾಸನ ಕಡೆಯಿಂದ ಬಂದ ಬಸ್, ಚಾಲಕನ ನಿಯಂತ್ರಣ ತಪ್ಪಿ ಟ್ಯಾಕ್ಟರ್‌ಗೆ ಡಿಕ್ಕಿ ಹೊಡೆಯುತ್ತಿದ್ದಂತೆ, ಶೋಭಾಗೂ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತ ಪಟ್ಟಿದ್ದು, ಬಸ್ ಹೆದ್ದಾರಿಯಿಂದ 5 ಅಡಿ ಅಂತರದಲ್ಲಿದ್ದ ಸರ್ವಿಸ್ ರಸ್ತೆಗೆ ನುಗ್ಗಿ ಮರಕ್ಕೆ ಡಿಕ್ಕಿಯಾಗಿದೆ. ಇದರಿಂದ 18 ಪ್ರಯಾಣಿಕರ ಪೈಕಿ ನಾಲ್ವರು ಗಾಯಗೊಂಡಿದ್ದು, 3 ಮಂದಿ ಗಂಭೀರ ಸ್ಥಿತಿಯಲ್ಲಿದ್ದ ಕಾರಣ ಬೆಂಗಳೂರಿನ ನಿಮ್ಹಾನ್ಸ್ ಗೆ ದಾಖಲಿಸಲಾಗಿದೆ.
ವಿಶೇಷಚೇತನ ಗಂಡ ಹಾಗೂ ಇಬ್ಬರು ಮಕ್ಕಳನ್ನ ನೋಡಿಕೊಳ್ಳುತ್ತಿದ್ದ ಶೋಭಾ, ಸಾವನ್ನಪ್ಪಿದ ಹಿನ್ನೆಲೆ ಕುಟುಂಬಕ್ಕೆ ಆಧಾರಸ್ತಂಭವಿಲ್ಲದಂತಾಗಿದೆ. ಕುಟುಂಬಸ್ಥರು ಮತ್ತು ಗ್ರಾಮಸ್ಥರು ಟೋಲ್ ಗೆ ಮುತ್ತಿಗೆ ಹಾಕಿ ಮೃತಳ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ, ಪ್ರತಿಭಟನೆ ನಡೆಸಿದ್ರು.
ಸ್ಥಳಕ್ಕೆ ನೆಲಮಂಗಲ ವೃತ್ತ ನಿರೀಕ್ಷಕ ರಾಜೀವ್ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಿದರು. ಬಳಿಕ ಟೋಲ್ ಆಡಳಿತ ಮಂಡಳಿಯಿಂದ ಶವ ಸಂಸ್ಕಾರಕ್ಕೆ 30 ಸಾವಿರ ರೂ. ನೀಡಿದ್ದು, 4 ಲಕ್ಷ ಪರಿಹಾರಧನ, ಇಎಸ್‌ಐ- ಪಿಎಫ್ ಹಣವನ್ನು ಮೃತಳ ಕುಟುಂಬಕ್ಕೆ ನೀಡುವ ಭರವಸೆ ನೀಡಿದ್ದಾರೆ.
PublicNext
15/03/2022 11:06 pm