ವರದಿ .ಶ್ರೀನಿವಾಸ್ ಚಂದ್ರ
ಬೆಂಗಳೂರು: ರಾಜಧಾನಿಯಲ್ಲಿ ನಿನ್ನೆ ರಾತ್ರಿ ನಡೆದ ಪ್ರತ್ಯೇಕ ಎರಡು ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಕುಡಿದ ಮತ್ತಿನಲ್ಲಿ ಹೆಲ್ಮೆಟ್ ಧರಿಸದೆ ವೇಗವಾಗಿ ಬೈಕ್ ಚಲಾಯಿಸಿ ರಸ್ತೆವಿಭಜಕಕ್ಕೆ ಡಿಕ್ಕಿಯಾದ ಪರಿಣಾಮ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ನಾಗರಭಾವಿ ರಸ್ತೆಯಲ್ಲಿ ವೇಗವಾಗಿ ಚಾಲನೆ ಮಾಡಿ ನಿಯಂತ್ರಣ ತಪ್ಪಿ ಮತ್ತೋರ್ವ ಬಲಿಯಾಗಿದ್ದಾನೆ.
ನಿನ್ನೆ ರಾತ್ರಿ ಮೃತ ಲಕ್ಷ್ಮೀಶ, ರಾಘವೇಂದ್ರ ಹಾಗೂ ಸ್ನೇಹಿತರು ರೆಸ್ಟೋರೆಂಟ್ ಗೆ ತೆರಳಿ ಪಾರ್ಟಿ ಮಾಡಿದ್ದರು. ಪಾರ್ಟಿ ಮುಗಿಸಿಕೊಂಡು ನಾಲ್ವರು ಎರಡು ಬೈಕಿನಲ್ಲಿ ಪ್ರತ್ಯೇಕವಾಗಿ ಬರುತ್ತಿದ್ದರು. ಬೈಕ್ ಚಾಲನೆ ವೇಳೆ ಹೆಲ್ಮೆಟ್ ಧರಿಸಿಕೊಂಡಿರಲಿಲ್ಲ.
ಹೊಸಕೆರೆಹಳ್ಳಿಯ ಪಿಇಎಸ್ ಕಾಲೇಜು ಬಳಿ ಕುಡಿದ ಮತ್ತಿನಲ್ಲಿ ಬರುವಾಗ ವೇಗವಾಗಿ ಬೈಕ್ ಚಲಾಯಿಸಿದ್ದರಿಂದ ನಿಯಂತ್ರಣ ಕಳೆದುಕೊಂಡು ರಸ್ತೆ ಡಿವೈಡರ್ ಗೆ ಡಿಕ್ಕಿಯಗಿದೆ. ಡಿಕ್ಕಿ ರಭಸಕ್ಕೆ ತಲೆಗೆ ಪೆಟ್ಟಾಗಿದ್ದ ಲಕ್ಷ್ಮೀಶ ಹಾಗೂ ರಾಘವೇಂದ್ರ ಸಾವನ್ನಪ್ಪಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಡಿವೈಡರ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ್ದಾನೆ. 38 ವರ್ಷದ ಭಾಸ್ಕರ ಎಂಬುವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ನಾಗರಭಾವಿ ರಿಂಗ್ ರಸ್ತೆಯ ಅಂಡರ್ ಪಾಸ್ ಬಳಿ ನಿನ್ನೆ ರಾತ್ರಿ ಈ ಘಟನೆ ಸಂಭವಿಸಿದೆ. ವೇಗವಾಗಿ ವಾಹನ ಚಾಲನೆ ಮಾಡಿ ನಿಯಂತ್ರಣ ಸಿಗದೆ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತ ಭಾಸ್ಕರ್ ಬೈಕ್ ರೇಸರ್ ಆಗಿದ್ದ ,ಘಟನೆ ಸಂಬಂದ ಬ್ಯಾಟರಾಯನಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಎರಡು ಅಪಘಾತ ದಲ್ಲಿ ಸವಾರರು ಹೈ ಎಂಡ್ ಬೈಕ್ ನಲ್ಲಿ ಸವಾರಿ ಮಾಡಿ ಅಪಘಾತಕ್ಕೀಡಾಗಿದ್ದಾರೆ.
PublicNext
07/01/2022 11:44 am