ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಶಪ್ಪನವರ, ನವಲಿಹಿರೇಮಠ ಬೆಂಬಲಿಗರ ಮಧ್ಯೆ ಈದ್ ನಲ್ಲಿ ನಡೆಯಿತು "ಹಾರದ" ರಾಜಕೀಯ

ಬಾಗಲಕೋಟೆ: ಇಳಕಲ್ ನಲ್ಲಿ ಭಾನುವಾರ ಈದ್ ಮೆರವಣಿಗೆ ವೇಳೆ ಭಾರೀ ರಾಜಕೀಯ ಹೈಡ್ರಾಮಾ ನಡೆದಿದ್ದು, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮತ್ತು ಮುಂದಿನ ವಿಧಾನಸಭೆ ಚುನಾವಣಾ ಸ್ಪರ್ಧಾಕಾಂಕ್ಷಿ ಎಸ್. ಆರ್.ನವಲಿಹಿರೇಮಠ ಬೆಂಬಲಿಗರ ನಡುವೆ "ಹಾರದ" ರಾಜಕಾರಣ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಈದ್ ಮೀಲಾದ್ ಹಬ್ಬದ ನಿಮಿತ್ತ ಇಳಕಲ್ ನಲ್ಲಿ ಮುಸ್ಲಿಂ ಬಾಂಧವರು ಮೆರವಣಿಗೆ ಆಯೋಜಿಸಿದ್ದರು. ಮೆರವಣಿಗೆಯಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮತ್ತು ಎಸ್ ಆರ್ ಎನ್ ಪೌಂಢೇಶನ್ ಸಂಸ್ಥಾಪಕ ಎಸ್. ಆರ್. ನವಲಿಹಿರೇಮಠ ಭಾಗವಹಿಸಿದ್ದರು.

ಆರಂಭದಲ್ಲಿ ಮೆರವಣಿಗೆ ಸಹಜವಾಗಿ ಮುನ್ನಡೆದಿತ್ತು. ಮೆರವಣಿಗೆ ಮಧ್ಯದಲ್ಲೇ ಉಭಯ ಮುಖಂಡರ ಬೆಂಬಲಿಗರು ತಮ್ಮ ತಮ್ಮ ನಾಯಕನಿಗೆ ಹಾರಹಾಕಲು ಮುಂದಾದರು. ಹಾರ ಹಾಕುವ ಪ್ರಕ್ರಿಯೆ ಉಭಯತರ ಬೆಂಬಲಿಗರ ನಡುವೆ ಪ್ರತಿಷ್ಠೆ ಆಗಿ ಪರಿಣಮಿಸಿತು.

ಕಾಶಪ್ಪನವರ ಮತ್ತು ನವಲಿಹಿರೇಮಠ ಅವರನ್ನು ಅವರವರ ಬೆಂಬಲಿಗರು ಹೆಗಲ ಮೇಲೆ ಕೂಡ್ರಿಸಿಕೊಂಡು ಹಾರ ಹಾಕಲು ಪೈಪೋಟಿಗೆ ಇಳಿದರು.ಪರಿಣಾಮವಾಗಿ ಈದ್ ಮೆರವಣಿಗೆ ಯಾವುದೋ ಒಂದು ರಾಜಕೀಯ ರ್ಯಾಲಿಯೋ, ವಿಜಯೋತ್ಸವದ ಮೆರವಣಿಗೆಯೋ ಎನ್ನುವಂತೆ ಕಂಡು ಬಂದಿತು.

ಈಗಾಗಲೇ ಹುನಗುಂದ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆ ಕಾವು ಏರತೊಡಗಿದೆ. ಪಕ್ಷಾಂತರ ಪಿಡುಗು ಜೋರಾಗಿದೆ.

ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿ ಅಭ್ಯರ್ಥಿಗಳ ಎದರು ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನವಲಿಹಿರೇಮಠ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ನಡುಕ ಹುಟ್ಟಿಸಿದ್ದರು. ಈಗ ಮತ್ತೆ ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಪಕ್ಷೇತರರಾಗಿ ಸ್ಪರ್ಧಿಸಲು ಭಾರಿ ತಯಾರಿ ನಡೆಸಿದ್ದಾರೆ. ಶಾಸಕ ಕಾಶಪ್ಪನವರ ಕೂಡಾ ಚುನಾವಣೆ ತಯಾರಿ ಆರಂಭಿಸಿದ್ದಾರೆ.

ಏತನ್ಮಧ್ಯೆ ಈದ್ ಮೆರವಣಿಗೆಯಲ್ಲಿ ಉಭಯ ಮುಖಂಡರ "ಹಾರದ" ರಾಜಕಾರಣ ನಡೆದದ್ದು ಕ್ಷೇತ್ರದ ಜನ ಹುಬ್ಬೇರಿಸುವಂತೆ ಮಾಡಿದೆ.

Edited By : Nirmala Aralikatti
Kshetra Samachara

Kshetra Samachara

10/10/2022 01:04 pm

Cinque Terre

6 K

Cinque Terre

0