ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ಇರುವ ಭೂಮಿಯ ಬಿಟ್ಟು ಹಲಕುರ್ಕಿ ಭೂಮಿಯ ಮೇಲೆ ಏಕೆ ಸಚಿವರ ಕಣ್ಣು ...!

ಬಾಗಲಕೋಟೆ: ಬೃಹತ್ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಸಚಿವರು ಕೈಗಾರಿಕಾ ಉದ್ದೇಶಕ್ಕೆ ಹಲಕುರ್ಕಿ ಗ್ರಾಮದ ಭೂಮಿ ಸ್ವಾಧೀನ ವಿಷಯದಲ್ಲಿ ಒತ್ತಾಯದಿಂದ ಜಮೀನು ಪಡೆಯುವುದಿಲ್ಲ, ಭೂಮಿ ಕೊಡಲು ಮುಂದಾಗುವ ರೈತರ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಹೇಳಿಕೆ ನೀಡಿದ್ರು. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ರೈತರ ವಿರೋಧದ ಮಧ್ಯೆ ಭೂಸ್ವಾಧೀನ ಮಾಡುವುದಿಲ್ಲ ಎನ್ನುವ ಭರವಸೆ ನೀಡಿದ್ದಾರೆ.

ಇಷ್ಟರ ಮಧ್ಯೆ ಹೋರಾಟವೂ ಮುಂದುವರೆದಿದೆ. ಏತನ್ಮಧ್ಯೆ ಜಿಲ್ಲೆಯಲ್ಲಿ ಈಗಾಗಲೇ ಸರ್ಕಾರ ಸ್ವಾಧೀನ ಪಡಿಸಿಕೊಂಡ ಭೂಮಿ ಇದೆ. ಅದನ್ನೇ ಬಳಕೆ ಮಾಡಿಕೊಳ್ಳದೇ ಹಾಗೆ ಬಿಟ್ಟಿರುವ ಸರ್ಕಾರ ಈಗ ಹೊಸ ಭೂಮಿಗೆ ಏಕೆ ಕೈ ಹಾಕಿದೆ ಎಂದು ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಬಹುತೇಕರು ಪ್ರಶ್ನಿಸಲಾರಂಭಿಸಿದ್ದಾರೆ.

ಜಿಲ್ಲೆಯ ಇಳಕಲ್ ತಾಲೂಕಿನ ಬಲಕುಂದಿ ಬಳಿ 100 ಎಕರೆ ಮತ್ತು ಗುಳೇದಗುಡ್ಡದ ಬಳಿಯ ಕೋಟೆಕಲ್ ಗ್ರಾಮದ ಹತ್ತಿರ 400 ಎಕರೆ ಸರ್ಕಾರ ಸ್ವಾಧೀನ ಪಡಿಸಿಕೊಂಡಿದೆ. ಬಾಗಲಕೋಟೆ ಬಿಟಿಡಿಎ ಸ್ವಾಧೀನ ಪಡಿಸಿಕೊಂಡ ಭೂಮಿಯಲ್ಲಿ 240 ಎಕರೆ ಭೂಮಿಯನ್ನು ಕೈಗಾರಿಕೆ ಉದ್ದೇಶಕ್ಕೆ ‌ಇಡಲಾಯಿತು. ಈ ಪೈಕಿ 85 ಎಕರೆ ಮಾತ್ರ ಅಭಿವೃದ್ದಿ ಪಡಿಸಲು ಸರ್ಕಾರ ಮುಂದಾಗಿದ್ದರೂ ಇದುವರೆಗೂ ಯಾವುದೇ ಪ್ರಗತಿ ಕಂಡು ಬಂದಿಲ್ಲ. ಒಟ್ಟು ಸ್ವಾಧೀನ ಜಮೀನು ಪೈಕಿ 85 ಎಕರೆ ಭೂಮಿ ಬಿಟ್ಟರೂ ಇನ್ನೂ ಶೇ.90 ರಷ್ಟು ಸದ್ಬಳಕೆ ಆಗಿಲ್ಲ, ಪಾಳು ಬಿದ್ದಿದೆ.

ಜಿಲ್ಲೆಯವರೇ ಆಗಿರುವ ಮಾನ್ಯ ಕೈಗಾರಿಕೆ ಸಚಿವರು ಆ ಬಗ್ಗೆ ಏಕೆ ಗಮನಹರಿಸುತ್ತಿಲ್ಲ. ಹಲಕುರ್ಕಿ ಗ್ರಾಮದ ಸುತ್ತಲಿನ ಫಲವತ್ತಾದ ಜಮೀನೇ ಏಕೆ ಬೇಕು ಎನ್ನುವ ಅನುಮಾನ ಜನಸಾಮಾನ್ಯರಲ್ಲಿ ಕಾಡಲಾರಂಭಿಸಿದೆ. ಅಲ್ಲದೇ ಭೂಸ್ವಾಧೀನದ ವಿರುದ್ಧ ಹೋರಾಟ ಆರಂಭಗೊಂಡು 15 ದಿನಗಳಾದರೂ ಕೈಗಾರಿಕಾ ಸಚಿವರು ಕ್ಷೇತ್ರದ ಹಲಕುರ್ಕಿ ಜನರನ್ನು ಮಾತನಾಡಿಸುವ ಗೋಜಿಗೆ ಹೋಗಿಲ್ಲ ಪರಿಣಾಮ ಸಚಿವರ ವಿರುದ್ಧದ ಅವರ ಆಕ್ರೋಶ ಮುಗಿಲು ಮುಟ್ಟಿದೆ.

Edited By :
PublicNext

PublicNext

03/10/2022 07:15 pm

Cinque Terre

25.82 K

Cinque Terre

0