ವರದಿ: ವಿಠ್ಠಲ ಬಲಕುಂದಿ
ಬಾಗಲಕೋಟೆ: ಎಲ್ಲೋ ಮಳೆ ಆದರೆ ಇನ್ನೆಲ್ಲೋ ಪ್ರವಾಹ ಉಂಟಾಗುವ ಹಾಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಧೋಳದಲ್ಲಿ ಸಕ್ಕರೆ ಉದ್ಯಮಿ, ಯುವ ರಾಜಕಾರಣಿ ಸಂಗಮೇಶ ನಿರಾಣಿ ಅವರ ಆತಿಥ್ಯ ಸ್ವೀಕರಿದ್ದು ತೇರದಾಳ ಮತಕ್ಷೇತ್ರದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದೆ.
ಸಿದ್ದರಾಮಯ್ಯ ಇಂದು ಜಮಖಂಡಿಯಲ್ಲಿ ದಿ.ಶಾಸಕ ಸಿದ್ದು ನ್ಯಾಮಗೌಡರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮುಧೋಳದಲ್ಲಿ ಮಾಜಿ ಸಚಿವ, ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಆರ್. ಬಿ ತಿಮ್ಮಾಪುರ ಜನ್ಮೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೆಲಿಕಾಪ್ಟರ್ ಮೂಲಕ ನಿರಾಣಿ ಶುಗರ್ಸ ಆವರಣದಲ್ಲಿ ಲ್ಯಾಂಡಿಂಗ್ ಆದಾಗ ಉದ್ಗಮಿ ಸಂಗಮೇಶ ನಿರಾಣಿ ಬರಮಾಡಿಕೊಂಡರು. ಜತೆಗೆ ತಮ್ಮ ನಿವಾಸಕ್ಕೂ ಕರೆದುಕೊಂಡು ಹೋಗಿ ಸನ್ಮಾನಿಸಿ ನಾಲ್ಕು ಸೌಜನ್ಯದ ಮಾತುಗಳನ್ನಾಡಿದ್ದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ಉಭಯತರ ಸೌಜನ್ಯದ ಭೇಟಿಗೆ ರಾಜಕೀಯ ಲೇಪನ ಆಗಿರುವ ಹಿಂದೆ ಕಾರಣವೂ ಇದೆ. 2018 ರ ಚುನಾವಣೆ ಪೂರ್ವ ದಿಂದಲೂ ಸಿದ್ದರಾಮಯ್ಯ ಮತ್ರು ಸಂಗಮೇಶ ನಿರಾಣಿ ನಡುವೆ ರಾಜಕೀಯ ನಂಟು ಇದೆ. ಸಂಗಮೇಶ ನಿರಾಣಿ ಅವರು ಸಿದ್ದರಾಮಯ್ಯ ಅವರ ಮಾತಿಗೆ ಕಟ್ಟು ಬಿದ್ದಿದ್ದರೆ, 2018 ರಲ್ಲಿಯೇ ತೇರದಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಗಿರುತ್ತಿದ್ದರು.
ಅಂದು ಆರಂಭವಾದ ಇವರ ರಾಜಕೀಯ ನಂಟು ಇಂದಿಗೂ ಸೌಹಾರ್ದವಾಗಿದೆ. ಹಾಗಾಗಿ ಸಂಗಮೇಶ ನಿರಾಣಿ ತೇರದಾಳದಿಂದ ಅಭ್ಯರ್ಥಿ ಆಗಲಿದ್ದಾರೆ ಎನ್ನುವ ಗುಸುಗುಸು ಮಾತ್ರ ನಿರಂತರವಾಗಿದೆ. ಅಭಿಮಾನಿಗಳ ನಡೆ ಕೂಡ ಗುಸುಗುಸು ಮಾತುಗಳಿಗೆ ಇಂಬು ಕೊಡುವಂತಿದೆ. ಈಗಲೂ ತೇರದಾಳ ಕ್ಷೇತ್ರದಲ್ಲಿ ಸಂಗಮೇಶ ನಿರಾಣಿ ಅಭ್ಯರ್ಥಿ ಆಗಲಿದ್ದಾರೆ ಎಂದು ಹೇಳುತ್ತಲೇ ಇದ್ದಾರೆ. ಸಂಗಮೇಶ ನಿರಾಣಿ ಈ ವಿಷಯದಲ್ಲಿ ಏನೇ ಹೇಳಿದರೂ ನಂಬುವ ಸ್ಥಿತಿ ಉಳಿದಿಲ್ಲ.
ಏತನ್ಮಧ್ಯೆ 2023ರ ಚುನಾವಣೆಯ ಹೊಸ್ತಿಲಲ್ಲಿರುವಾಗ ಇಂದು ನಡೆದ ಬೆಳವಣಿಗೆ ಸಂಗಮೇಶ ಸ್ಪರ್ಧೆಗೆ ಇಂಬು ನೀಡುತ್ತಿವೆ. ರಾಜಕಾರಣದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು ಎನ್ನುವಂತೆ ಸಂಗಮೇಶ ಅವರ ವಿಷಯದಲ್ಲೂ ಏನೂ ಬೆಳವಣಿಗೆ ಆಗಬಹುದು. ಯಾವುದನ್ನು ಅಲ್ಲಗಳೆಯುವಂತಿಲ್ಲ. ಹಾಗಾಗಿ ತೇರದಾಳ ಕ್ಷೇತ್ರದಲ್ಲಿ ಮಾಜಿ ಸಚಿವೆ ಉಮಾಶ್ರೀ ಸೇರಿದಂತೆ ಇತರ ಕಾಂಗ್ರೆಸ್ ಆಕಾಂಕ್ಷಿಗಳಲ್ಲಿ ಸಿದ್ದರಾಮಯ್ಯ ಮತ್ತು ಸಂಗಮೇಶ ನಿರಾಣಿ ಅವರ ಸೌಜನ್ಯ ಭೇಟಿ ಇರುಸು ಮುರಿಸು ಮೂಡಿಸಿದ್ದರೂ ಬೆಳವಣಿಗೆಗಳನ್ನು ಕಾಯ್ದು ನೋಡಬೇಕಷ್ಟೆ!.
PublicNext
27/09/2022 09:58 pm