ಸ್ನೇಹಿತರೇ, ಭಾರತದಲ್ಲಿ ಚೀತಾ ಪ್ರಭೇದಗಳು ನಶಿಸಿ ಹೋಗಿವೆ ಎಂದು ೧೯೫೨ರಲ್ಲಿ ಘೋಷಿಸಲಾಗಿದೆ. ಬೇಟೆ, ಆವಾಸಸ್ಥಾನದ ನಷ್ಟ ಮತ್ತು ಆಹಾರದ ಕೊರತೆಯಿಂದ ಭಾರತದಲ್ಲಿ ಚೀತಾಗಳ ಕಣ್ಮರೆಗೆ ಕಾರಣವಾಯಿತು ಎಂದು ತಜ್ಞರು ಹೇಳುತ್ತಾರೆ. ಆದರೆ ಸುಮಾರು ೭೦ವಷ೯ಗಳ ಬಳಿಕ 'ಭಾರತದಲ್ಲಿ ಚೀತಾಗಳ ಪರಿಚಯಕ್ಕಾಗಿ ಕ್ರಿಯಾ ಯೋಜನೆ' ಅಡಿಯಲ್ಲಿ ಚೀತಾಗಳನ್ನು ಮರುಪರಿಚಯಿಸಲು ನಿರ್ಧರಿಸಿ, ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ (೧೭ ಸೆಪ್ಟೆಂಬರ್ ೨೦೨೨) ದಿನದಂದು ದಕ್ಷಿಣ ಆಫ್ರಿಕಾ ಖಂಡದ ನಮೀಬಿಯಾ ದೇಶದಿಂದ ಭಾರತಕ್ಕೆ ಚೀತಾಗಳನ್ನು ತರಿಸಿ ಕೊಡುಗೆಯಾಗಿ ನೀಡಿ, ಭಾರತದಲ್ಲಿ ಮತ್ತೆ ಚೀತಾ ಪ್ರಭೇದಗಳು ಮರುಜೀವ ಪಡೆಯುವ ಹಾಗೆ ಭಾರತ ಸಕಾ೯ರವು ಒಂದು ಅದ್ಭುತವಾದ ಕೆಲಸವನ್ನು ಮಾಡಿತು. ಸದ್ಯ ಈ ಚೀತಾಗಳನ್ನು ಮಧ್ಯಪ್ರದೇಶದ ಕುನೋ ಪಾಲ್ಪುರ ರಾಷ್ಟೀಯ ಉದ್ಯಾನವನದಲ್ಲಿ ಕಾಣಬಹುದಾಗಿದೆ.
ಸ್ನೇಹಿತರೇ ಹಾಗಾದರೇ ಈ ಚೀತಾಗಳ ಬಗ್ಗೆ ಮಾಹಿತಿ ತಿಳಿಸುತ್ತೇನೆ ಬನ್ನಿ.
ಸ್ನೇಹಿತರೇ, ಚಿತಾದ ವೈಜ್ಞಾನಿಕ ಹೆಸರು ಅಸಿನೋನಿಕ್ಸ್ ಜುಬಾಟಸ್ (Acinonyx jubatus). ಈ ಚೀತಾಗಳು ಬೆಕ್ಕಿನ ಜಾತಿಯ ಪ್ರಭೇದಗಳಾಗಿವೆ. ಇವು ಹುಲ್ಲುಗಾವಲಿನಲ್ಲಿ ವಾಸಿಸುವ ಪ್ರಾಣಿಗಳಾಗಿವೆ. ಚೀತಾಗಳು ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಓಡುವ ಪ್ರಾಣಿಗಳಾಗಿವೆ. ಇವು ಮಾಂಸಹಾರಿ ಪ್ರಾಣಿಗಳಾಗಿದ್ದು, ಅತ್ಯಂತ ವೇಗವಾಗಿ ಓಡಿ ಪ್ರಾಣಿಗಳನ್ನು ಬೇಟೆಯಾಡುತ್ತವೆ. ಆಫ್ರಿಕಾದಲ್ಲಿ ಚೀತಾಗಳ ಜನಸಂಖ್ಯೆ ಹೆಚ್ಚಿದೆ. ಚೀತಾಗಳನ್ನು ಏಷ್ಯಾದಲ್ಲಿಯೂ ಕಾಣಬಹುದು. ಈ ಎರಡು ಗುಂಪಿನ ಚಿತಾ ಪ್ರಭೇದಗಳು ಅಳುವಿನಂಚಿನಲ್ಲಿವೆ. ಏಷ್ಯಾದಲ್ಲಿ ಆವಾಸಸ್ಥಾನದ ನಷ್ಟದಿಂದ ಕಾಡಿನಲ್ಲಿ ಅವುಗಳ ಜನಸಂಖ್ಯೆ ೨೫೦ಕ್ಕೆ ಇಳಿದಿದೆ.
ಚೀತಾಗಳ ದೇಹದ ತೂಕ ೩೪ ರಿಂದ ೬೫ ಕೆಜಿ ಇದ್ದು, ೪ ಅಡಿ ಉದ್ದ ಹಾಗೂ ೨ ಅಡಿ ಎತ್ತರವಿರುತ್ತವೆ. ಬಾಲ ೩೦ ಇಂಚು ಉದ್ದವಿರುತ್ತದೆ. ಚೀತಾಗಳನ್ನು ಕಿತ್ತಳೆ ಬಣ್ಣದ ತುಪ್ಪಳದಿಂದ ಕಪ್ಪು ಚುಕ್ಕೆಗಳಿಂದ ಮತ್ತು "ಕಪ್ಪು ಕಣ್ಣೀರು" ಎಂದು ಕರೆಯಲಾಗುವ ಎರಡು ಕಪ್ಪು ಗೆರೆಗಳಿಂದ ಸುಲಭವಾಗಿ ಗುರುತಿಸಲಾಗುತ್ತದೆ.
ಚೀತಾಗಳು ದಿನನಿತ್ಯದ ಪ್ರಾಣಿಗಳಾಗಿದ್ದು, ಹಗಲಿನಲ್ಲಿ ಸಕ್ರಿಯವಾಗಿರುತ್ತವೆ. ಇವು ಮೊಲ, ಮುಳ್ಳುಹಂದಿ, ಜಿಂಕೆ, ಕಾಡು ಹಂದಿ ಹಾಗೂ ಮುಂತಾದ ಪ್ರಾಣಿಗಳನ್ನು ತಿಂದು ಬದುಕುತ್ತವೆ. ಚೀತಾಗಳು ಪ್ರತಿ ೩ ರಿಂದ ೪ ದಿನಗಳಿಗೊಮ್ಮೆ ನೀರನ್ನು ಕುಡಿಯುತ್ತವೆ. ಏಕೆಂದರೆ ಬೇಟೆಯಾಡಿದ ಪ್ರಾಣಿಗಳ ಮಾಂಸದಲ್ಲಿ ನೀರು ಇರುವುದರಿಂದ ಮಾಂಸದಿಂದ ನೀರನ್ನು ಹೀರುತ್ತವೆ. ಚೀತಾಗಳು ಭೂಮಿಯ ಮೇಲೆ ಅತ್ಯಂತ ವೇಗವಾಗಿ ಓಡುವ ಪ್ರಾಣಿಗಳಾಗಿದ್ದು.ಇವು ಗಂಟೆಗೆ ಸುಮಾರು ೧೧೨ ಕಿಲೋಮೀಟರನಷ್ಟು ಚಲಿಸುತ್ತವೆ. ಚೀತಾಗಳು ತುಂಬಾ ವೇಗವಾಗಿ ಓಡುತ್ತವೆಯಾದರೂ, ಇವು ಬಹಳ ಸಮಯ ಓಡುವುದಿಲ್ಲ. ೩ ನಿಮಿಷದಲ್ಲಿ ಅಧ೯ ಕಿಲೋಮೀಟರನಷ್ಟು ಓಡಿ ದನಿವಾರಿಸಿಕೊಳ್ಳಲು ವಿಶ್ರಾಂತಿ ಪಡೆಯುತ್ತವೆ.
ವೇಗದ ಓಟಕ್ಕೆ ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ ಮತ್ತು ಹೊರಗಿನ ಉಷ್ಣತೆಯು ಅಧಿಕವಾಗಿರುವಾಗ ಇದು ವಿಶೇಷವಾಗಿ ಕಷ್ಟಕರವಾಗಿರುತ್ತದೆ. ಚೀತಾವು ತ್ವರಿತ ಬೆನ್ನಟ್ಟುವ ಸಮಯದಲ್ಲಿ ಪ್ರಾಣಿಯನ್ನು ಹಿಡಿದರೆ, ಅದು ವಿಶ್ರಾಂತಿ ತೆಗೆದುಕೊಳ್ಳುತ್ತದೆ (ಸಾಮಾನ್ಯ ದೇಹದ ಉಷ್ಣತೆಯನ್ನು ಮರಳಿ ಪಡೆಯುತ್ತದೆ ಮತ್ತು ಉಸಿರಾಟವನ್ನು ನಿಧಾನಗೊಳಿಸುತ್ತದೆ) ಅದು ಬೇಟೆಯನ್ನು ಹಿಡಿದಿಟ್ಟುಕೊಂಡು ಉಸಿರುಗಟ್ಟಿಸುತ್ತದೆ. ವೇಗದ ಓಟದ ಸಮಯದಲ್ಲಿ ಚೀತಾ ಬಾಲವು ಅತ್ಯಗತ್ಯವಾಗಿರುತ್ತದೆ, ಏಕೆಂದರೆ ಇದು ಪ್ರಾಣಿಯನ್ನು ಸಮತೋಲನಗೊಳಿಸುತ್ತದೆ ಮತ್ತು ವೇಗವಾಗಿ ಓಡಲು ಅನುಮತಿಸುತ್ತದೆ.
ಚೀತಾಗಳಿಗೆ ಉತ್ತಮವಾಗಿ ಮರ ಹತ್ತಲು ಆಗುವುದಿಲ್ಲ. ಅಲ್ಲದೆ, ಇವು ಘರ್ಜನೆ ಮಾಡದ ಏಕೈಕ ಬೆಕ್ಕುಗಳಾಗಿವೆ. ಇವು ತಮ್ಮ ಮನಸ್ಥಿತಿಯನ್ನು ತೋರಿಸಲು ಮುಖಭಾವವನ್ನು ಬಳಸುತ್ತವೆ. ಹೆಣ್ಣು ಚೀತಾಗಳು ಒಂಟಿಯಾಗಿರುವ ಪ್ರಾಣಿಗಳು, ಆದರೆ ಪುರುಷರು ಸಹೋದರರಿಂದ ("ಸಮ್ಮಿಶ್ರ" ಎಂದು ಕರೆಯಲ್ಪಡುವ) ಸಣ್ಣ ಗುಂಪುಗಳಲ್ಲಿ ವಾಸಿಸುತ್ತವೆ. ಸಾಮಾನ್ಯವಾಗಿ ಗುಂಪಿನಿಂದ ಒಬ್ಬ ಸಹೋದರ ಮಾತ್ರ ಮಿಲನದ ಅವಧಿಯಲ್ಲಿ ಹೆಣ್ಣು ಚೀತಾ ಜೊತೆ ಸಂಗಾತಿಯಾಗುತ್ತದೆ.
ಚೀತಾಗಳು ಸಾಮಾನ್ಯವಾಗಿ ಶುಷ್ಕ (ಬೇಸಿಗೆಕಾಲ) ಋತುವಿನಲ್ಲಿ ಸಂಗಾತಿಯಾಗುತ್ತವೆ. ಇದರ ಪರಿಣಾಮವಾಗಿ ಗರ್ಭಾವಸ್ಥೆಯು ೩ ತಿಂಗಳು ಇರುತ್ತದೆ ಮತ್ತು ಆರ್ದ್ರ (ಮಳೆಗಾಲ) ಋತುವಿನ ಆರಂಭದಲ್ಲಿ ಕೊನೆಗೊಳ್ಳುತ್ತದೆ. ಹೆಣ್ಣು ಚೀತಾ ೩ ರಿಂದ ೫ ಮರಿಗಳ ಜನನ ನೀಡುತ್ತದೆ. ಮರಿಗಳು ತಮ್ಮ ಜೀವನದ ಮೊದಲ ವಾರಗಳನ್ನು ತಾಯಿಯೊಡನೆ ಗುಹೆಯಲ್ಲಿ ಕಳೆಯುತ್ತವೆ. ಬೇಟೆಯ ಸಮಯದಲ್ಲಿ ತಾಯಿ ಮರಿಗಳನ್ನು ಬಿಡಬೇಕಾಗುತ್ತದೆ. ಮರಿಗಳ ಮರಣ ಪ್ರಮಾಣವು ತುಂಬಾ ಹೆಚ್ಚಾಗಿದೆ - ೯೦%. ೫ ರಿಂದ ೬ ವಾರಗಳ ವಯಸ್ಸಿನ ಚೀತಾಗಳು ತಮ್ಮ ತಾಯಿಯೊಂದಿಗೆ ಬೇಟೆಯಾಡುತ್ತವೆ ಮತ್ತು ಅವು ೧೮ ತಿಂಗಳುಗಳನ್ನು ತಲುಪುವವರೆಗೆ ಅವಳೊಂದಿಗೆ ಇರುತ್ತವೆ. ಕಾಡಿನಲ್ಲಿ ಚೀತಾಗಳ ಸರಾಸರಿ ಜೀವಿತಾವಧಿ ೧೨ ವರ್ಷ ಮತ್ತು ಸೆರೆಯಲ್ಲಿ ೧೭ ವಷ೯ಗಳವರೆಗೆ ಜೀವಿಸುತ್ತವೆ.
ಲೇಖಕರು
ನವೀನ ಪ್ಯಾಟಿಮನಿ
ಚರ್ಮ ಪ್ರಸಾಧನ ಕಲಾ ತಜ್ಞರು
ಪ್ರಾಣಿಶಾಸ್ತ್ರ ವಸ್ತುಸಂಗ್ರಹಾಲಯ ಪ್ರಾಣಿಶಾಸ್ತ್ರ ವಿಭಾಗ,
ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯ,ಧಾರವಾಡ.
ಇಮೇಲ್:- naveenpyatimani9901@gmail.com
ಸಂಪರ್ಕ:- ೯೯೦೧೨೦೮೦೪೫
PublicNext
26/09/2022 09:43 pm