ಬೆಳಗಾವಿ: ಹುಕ್ಕೇರಿ ತಾಲೂಕಿನ ಹತ್ತರಗಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ.ಘಟನೆಯಲ್ಲಿ ಓರ್ವ ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, 5 ಮಂದಿಗೆ ಗಾಯವಾಗಿದೆ.
ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ವಡುಜ್ ಗ್ರಾಮದ ಸಾಜಿದ್ ಮುಲ್ಲಾ ಮತ್ತು ಅವರ ಕುಟುಂಬಸ್ಥರು ಕಾರಿನಲ್ಲಿ ಕಿತ್ತೂರಿಗೆ ಅಂತ್ಯಕ್ರಿಯೆಗೆ ಹೋಗುತ್ತಿದ್ದ ವೇಳೆ ಇಂದು ಬೆಳಿಗ್ಗೆ 8.30 ರ ಸುಮಾರಿಗೆ ಹತ್ತರಗಿ ಬಳಿ ಈ ಅಪಘಾತ ಸಂಭವಿಸಿದೆ.
ಘಟನೆಯಲ್ಲಿ 6 ವರ್ಷದ ಬಾಲಕ ಸಿದ್ಧಿಕ್ ಸಾಜಿದ್ ಮುಲ್ಲಾ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಇನ್ನುಳಿದ ಐದು ಮಂದಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಯಮಕನಮರಡಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ವರದಿ:ಸಂತೋಷ ಬಡಕಂಬಿ
PublicNext
03/08/2022 04:12 pm