ದಾವಣಗೆರೆ: ನಗರದ ಎರಡು ಕಡೆ ಪ್ರತ್ಯೇಕ ಪ್ರಕರಣಗಳಲ್ಲಿ ಆಕಸ್ಮಿಕ ಬೆಂಕಿ ತಗುಲಿದ ಘಟನೆ ನಡೆದಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ.
ಶಾರ್ಟ್ ಸರ್ಕ್ಯೂಟ್ ನಿಂದ ಟ್ರಾನ್ಸ್ ಫಾರ್ಮರ್ ಹೊತ್ತಿ ಉರಿದ ಘಟನೆ ಆಜಾದ್ ನಗರದ ಮಂಡಕ್ಕಿಭಟ್ಟಿ ಲೇಔಟ್ ನಲ್ಲಿ ನಡೆದಿದ್ದು, ಇಡೀ ಟ್ರಾನ್ಸ್ ಫಾರ್ಮರ್ ಸೇರಿ ಸುತ್ತಲೂ ಬೆಂಕಿ ಆವರಿಸಿತ್ತು.
ಮಳೆಯಿಂದಾಗಿ ಟಿಸಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದ್ದು, ಟ್ರಾನ್ಸ್ ಫಾರ್ಮರ್ ಧಗ ಧಗ ಹೊತ್ತಿ ಉರಿದ ಪರಿಣಾಮ ಸುತ್ತಲಿನ ಜನರಲ್ಲಿ ಆತಂಕ ಮೂಡಿತ್ತು. ಬೆಂಕಿ ಹೊತ್ತಿಕೊಂಡಿದ್ದನ್ನ ಗಮನಿಸಿದ ಜನರು ಮನೆಯಿಂದ ಹೊರ ಓಡಿ ಬಂದಿದ್ದಾರೆ. ಬಳಿಕ ಬೆಸ್ಕಾಂ ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು. ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿ ಸಿಬ್ಬಂದಿ ಬೆಂಕಿ ನಂದಿಸಿದರು. ಆಜಾದ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಸಿಲಿಂಡರ್ ಪೈಪ್ ನಲ್ಲಿ ಅನಿಲ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡ ಘಟನೆ ಕುಂದವಾಡ ರಸ್ತೆಯ ಸರ್ಕಲ್ ನಲ್ಲಿರುವ ಮಾರ್ವಾಡಿ ತಿಂಡಿ ಹೋಟೆಲ್ ನಲ್ಲಿ ಸಂಭವಿಸಿದೆ. ಯಾವುದೇ ಪ್ರಾಣಾಪಾಯವಾಗಿಲ್ಲ.ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಬೆಂಕಿ ಹೊತ್ತಿ ಉರಿದ ಪರಿಣಾಮ ಸ್ಥಳದಲ್ಲಿ ಸ್ವಲ್ಪ ಸಮಯ ಆತಂಕ ಉಂಟಾಗಿತ್ತು.
PublicNext
21/05/2022 02:34 pm