ತುಮಕೂರು: ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್ ಒಂದು ಪಾದಚಾರಿಗಳ ಮೇಲೆ ಹರಿದು, ಇಬ್ಬರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಕಾಶಾಪುರದ ತಿರುವಿನಲ್ಲಿ ನಡೆದಿದೆ.
ಕೆಎಸ್‌ಆರ್‌ಟಿಸಿ ಬಸ್ ಚಿಕ್ಕಬಳ್ಳಾಪುರದಿಂದ ಗೌರಿಬಿದನೂರು-ಮಧುಗಿರಿ-ಶಿರಾ ಮಾರ್ಗವಾಗಿ ತಿರುಪತಿಗೆ ತೆರಳುತ್ತಿತ್ತು. ಆದರೆ ಕೊರಟಗೆರೆ ತಾಲೂಕಿನ ಕಾಶಾಪುರ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬೇವಿನ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ರಸ್ತೆ ಮೇಲೆ ನಡೆದುಕೊಂಡು ಬರುತ್ತಿದ್ದ ಬಿಕ್ಷುಕನ ಮೇಲೆ ಬಸ್ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ನಂತರ ಅದೇ ಬಸ್ ರೈತ ಗೋಪಾಲಯ್ಯ ಎಂಬುವವರ ಮೇಲೆಯು ಹರಿದಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಗೋಪಾಲಯ್ಯ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ.
ಅತಿ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಬಸ್ ಚಾಲಕ ಅಪಘಾತದ ನಂತರ ಸ್ಥಳದಿಂದ ಪರಾರಿ ಆಗಿದ್ದಾರೆ. ಬಸ್ನಲ್ಲಿದ್ದ 23 ಪ್ರಯಾಣಿಕರ ಪೈಕಿ 10 ಜನರಿಗೆ ಗಂಭೀರ ಗಾಯಗಳಾಗಿವೆ. ಜೊತೆಗೆ ಕಂಡಕ್ಟರ್ ಕಾಲು ಕಟ್ ಆಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಾಳುಗಳನ್ನು ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
PublicNext
23/01/2022 07:00 pm