ದಾವಣಗೆರೆ: ಎರಡು ಬೈಕ್ ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ಹೊನ್ನಾಳಿ ತಾಲೂಕಿನ ತಕ್ಕನಹಳ್ಳಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಬಸವಾಪಟ್ಟಣದ ಕೋಟೆಹಾಳ್ ಗ್ರಾಮದ ತಂದೆ ಮಹೇಶಪ್ಪ ಹಾಗೂ ಸಂಜು ಸಾವನ್ನಪ್ಪಿದ್ದರೆ, ಮತ್ತೊಂದು ಬೈಕ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಸವಾರ ದಿಡಗೂರಿನ ಪ್ರಶಾಂತ್ ಮೃತಪಟ್ಟ ದುರ್ದೈವಿಗಳು. ಆನಂದ್ ಎಂಬಾತನಿಗೆ ತೀವ್ರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಗಂಭೀರವಾಗಿದೆ. ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.
ತಾಲೂಕಿನ ದೇವರಹೊನ್ನಾಳಿ-ತಕ್ಕನಹಳ್ಳಿ ಗ್ರಾಮಗಳ ನಡುವೆ ಬರುವಂತಹ ಸವಳಂಗ-ಬಸವಾಪಟ್ಟಣ ಮುಖ್ಯರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ. ಹೊನ್ನಾಳಿ ತಾಲೂಕಿನ ದಿಡಗೂರು ಹಾಗೂ ಹರಳಹಳ್ಳಿ ಅವರಾದ ಪ್ರಶಾಂತ್, ಆನಂದ್ ತಮ್ಮೂರಿನತ್ತ ಹೊರಟಿದ್ದರು.
ಇನ್ನು ನ್ಯಾಮತಿ ತಾಲೂಕಿನ ಕೋಟೆಹಾಳ್-ಮರಿಗೊಂಡನಹಳ್ಳಿ ಗ್ರಾಮದವರಾದ ಮಹೇಶಪ್ಪ ಮತ್ತು ಸಂಜು ಸಹ ಬೈಕ್ ನಲ್ಲಿ ಬರುತ್ತಿದ್ದರು. ಈ ವೇಳೆ ಎರಡು ಬೈಕ್ ಗಳ ನಡುವೆ ಡಿಕ್ಕಿ ಆಗಿದೆ. ಈ ರಭಸಕ್ಕೆ ಮೂವರು ಸ್ಥಳದಲ್ಲಿ ಅಸುನೀಗಿದ್ದಾರೆ. ಅಪಘಾತದ ಸುದ್ದಿ ತಿಳಿದ ಕೂಡಲೇ ಸಬ್ ಇನ್ ಸ್ಪೆಕ್ಟರ್ ಬಸನಗೌಡ ಬಿರಾದಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ
ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
24/12/2021 10:50 am