ದಾವಣಗೆರೆ: "ಒಮ್ಮೆಲೆ ಕೇಳಿದ ಸ್ಫೋಟದ ಶಬ್ಧಕ್ಕೆ ಅಕ್ಕಪಕ್ಕದ ಮನೆಯವರು ಬೆಚ್ಚಿಬಿದ್ದರು. ಮನೆಯಲ್ಲಿದ್ದ ಮಹಿಳೆ ಹಾಗೂ ಮಕ್ಕಳು ಎದ್ನೋ ಬಿದ್ನೋ ಓಡಿ ಬಂದು ಪ್ರಾಣ ಉಳಿಸಿಕೊಂಡರು. ರಾತ್ರಿ ಆದ ಈ ಘಟನೆಯಿಂದ ಸುತ್ತಮುತ್ತಲಿನ ಜನರು ಬೆಚ್ಚಿಬಿದ್ದರು''
ಇಂಥ ಭಯಾನಕ ಘಟನೆ ನಡೆದಿರುವುದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಾವಿನಕಟ್ಟೆ ಗ್ರಾಮದಲ್ಲಿ. ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆ ಹೊತ್ತಿ ಉರಿದಿದೆ. ಧಗಧಗಿಸಿದ್ದನ್ನು ಕಂಡ ಜನರು ಭಯಭೀತರಾಗಿದ್ದು, ಸ್ಫೋಟದ ಶಬ್ಧ ಕೇಳುತ್ತಿದ್ದಂತೆ ದಿಗಿಲುಗೊಂಡರು.
ವೀಣಾ ಎಂಬ ಮಹಿಳೆಯ ಕೈಗೆ ಗಾಯವಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿ ಮೂವರು ಇದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಸಿಲಿಂಡರ್ ಬದಲಾಯಿಸುವ ವೇಳೆ ಆಕಸ್ಮಿಕವಾಗಿ ಬೆಂಕಿ ಕಿಡಿ ತಗುಲಿದ್ದು,
ಬೆಂಕಿ ಹೊತ್ತಿಕೊಳ್ಳುತಿದ್ದಂತೆ ಮನೆಯಿಂದ ಮಹಿಳೆ ಮತ್ತು ಮಕ್ಕಳು ಆಚೆ ಓಡಿಬಂದಿದ್ದಾರೆ. ತುಂಬಿದ ಸಿಲಿಂಡರ್ ಗೆ ಕನೆಕ್ಷನ್ ಕೊಡುವಾಗ ಸಿಲಿಂಡರ್ ಸ್ಫೋಟವಾಗಿದ್ದು, ಬೆಂಕಿಯ ಕೆನ್ನಾಲಿಗೆಗೆ ಮನೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
PublicNext
29/08/2021 04:29 pm