ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವದ್ದಿಕೆರೆ ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶನಿವಾರ ಸಂಜೆ ನಡೆದಿದೆ.
ರಾಘು (13), ಸಿದ್ದೇಶ (10) ಮೃತ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ. ಗ್ರಾಮದ ಗೋವಿಂದಪ್ಪ ಎಂಬುವವರ ಜಮೀನಿನಲ್ಲಿ ಕೃಷಿ ಹೊಂಡ ಇದ್ದು ಈಜಲು ಐದು ಜನ ಸ್ನೇಹಿತರು ತೆರೆಳಿದ್ದಾರೆ ಎಂದು ತಿಳಿದು ಬಂದಿದೆ. ಇದರಲ್ಲಿ ಇಬ್ಬರು ನೀರಿನಲ್ಲಿ ಈಜು ಬಾರದ ಹಿನ್ನೆಲೆಯಲ್ಲಿ ಮುಳುಗಿದ್ದಾರೆ. ಇಬ್ಬರು ಮೇಲೆ ಬಾರದ ಕಾರಣ ಗಾಬರಿಗೊಂಡ ಉಳಿದ ಸ್ನೇಹಿತರು ಓಡಿ ಹೋಗಿ ಪೋಷಕರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಪೋಷಕರು ಸ್ಥಳಕ್ಕೆ ಬರುವ ಹೊತ್ತಿಗೆ ಆಕಸ್ಮಿಕವಾಗಿ ಓರ್ವ ವಿದ್ಯಾರ್ಥಿ ರಾಘು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬನನ್ನು ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಕೊಂಡೊಯ್ಯುವ ವೇಳೆ ಮಾರ್ಗ ಮಧ್ಯೆ ಪ್ರಾಣ ಪಕ್ಷಿ ಹಾರಿ ಹೋಗಿದೆ. ರಾಘು ಹಾಗೂ ಸಿದ್ದೇಶ್ 6 ನೇ ತರಗತಿ ಓದುತ್ತಿದ್ದರು ಎನ್ನಲಾಗಿದೆ. ವಿಷಯ ತಿಳಿದ ತಕ್ಷಣ ಐಮಂಗಲ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಐಮಂಗಲ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
PublicNext
07/08/2021 09:10 pm