ಪುಕ್ಕಟೆ ಸಿಗುತ್ತೆ ಅಂದ್ರೆ ಬಿಡೋ ಮಂದಿ ಬಹಳ ಕಮ್ಮಿ.. ಅಪಘಾತದಲ್ಲಿ ರಸ್ತೆ ಬದಿಗೆ ಉರುಳಿದ ವಾಹನಗಳಿಂದ ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ ತುಂಬಿಕೊಂಡು ಹೋದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಛತ್ತೀಸಗಢದ ರಾಯ್ಪುರ ಹೆದ್ದಾರಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ಮೀನುಗಳನ್ನ ತುಂಬಿಸಿಕೊಂಡು ಬರುತ್ತಿದ್ದ ಲಾರಿಯೊಂದು ಉರುಳಿ ಬಿದ್ದಿತ್ತು. ಲಾರಿ ಉರುಳಿದ ರಭಸಕ್ಕೆ ಅದರಲ್ಲಿದ್ದ ಮೀನುಗಳೆಲ್ಲ ರಸ್ತೆ ತುಂಬಾ ಬಿದ್ದಿದ್ದವು. ನೀರಿನಿಂದ ಹೊರಬಂದು ಚಟಪಡಿಸುತ್ತಿದ್ದ ಫ್ರೇಷ್ ಮೀನುಗಳನ್ನು ಕಂಡು ಜನರು ದೌಡಾಯಿಸಿ ಸಿಕ್ಕಷ್ಟು ಬಾಚಿಕೊಂಡು ಹೋಗಿದ್ದಾರೆ.
ಮೀನು ಆಯ್ದುಕೊಳ್ಳಲು ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರದಲ್ಲಿ ಅಸ್ತವ್ಯಸ್ತವಾಯಿತು. ಈ ಸಂಬಂಧ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಜನರನ್ನು ಚದುರಿಸಿದರು. ಬಳಿಕ ಸ್ಥಳೀಯರ ಸಹಾಯದಿಂದ ಲಾರಿಯನ್ನು ಮೇಲಕ್ಕೆತ್ತಿದರು. ಸಂಚಾರ ಸುಗಮಗೊಳಿಸಿದ ಪೊಲೀಸರು, ಅಳಿದುಳಿದ ಮೀನುಗಳನ್ನು ವಾಪಸ್ ಲಾರಿಗೆ ತುಂಬಿ ರಾಯ್ಪುರಕ್ಕೆ ಕಳುಹಿಸಿದರು.
ಜನರು ಮೀನುಗಳನ್ನು ಆಯ್ದುಕೊಳ್ಳುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತಮ್ಮದೆ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
PublicNext
28/01/2021 05:46 pm