ಕಾರವಾರ: ಗ್ಯಾಸ್ ತುಂಬಿದ್ದ ಟ್ಯಾಂಕರ್ ಪಲ್ಟಿಯಾದ ಪರಿಣಾಮ 40ಕ್ಕೂ ಹೆಚ್ಚು ಮನೆಗಳನ್ನು ಪೊಲೀಸರು ಖಾಲಿ ಮಾಡಿಸಿದ ಘಟನೆ ಇಂದು ಬೆಳಗ್ಗೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ರಾಷ್ಟ್ರೀಯ ಹೆದ್ದಾರಿಯ 66ರ ಹಂದಿಗೋಣದಲ್ಲಿ ನಡೆದಿದೆ.
ಹುಬ್ಬಳ್ಳಿಯಿಂದ ಮಂಗಳೂರಿಗೆ ತೆರಳುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿಯಾಗಿತ್ತು, ಈ ವೇಳೆ ಟ್ಯಾಂಕರ್ ಹಿಂಭಾಗದಲ್ಲಿ ಗ್ಯಾಸ್ ಸೋರಿಕೆಯಾಗುತಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಫೋಟಗೊಳ್ಳದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದರು. ಈ ವೇಳೆ ಕಾರವಾರ-ಮಂಗಳೂರು ಚತುಷ್ಪತ ಹೆದ್ದಾರಿಯನ್ನು ಬಂದ್ ಮಾಡಿದ್ದು, ಸಂಚಾರಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಿದ್ದರು.
ಆದರೇ ಸಂಜೆ ವೇಳೆಗೆ ಟ್ಯಾಂಕರ್ ನಲ್ಲಿ ಸೋರಿಕೆ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಕುಮಟಾ ತಾಲೂಕಿನ ಹಂದಿಗೊಣದ ಹೆದ್ದಾರಿ ಸುತ್ತಮುತ್ತಲ ಪ್ರದೇಶದ 40 ಮನೆಗಳಲ್ಲಿನ ನಿವಾಸಿಗಳನ್ನು ಮನೆಯಿಂದ ಖಾಲಿ ಮಾಡಿಸಲಾಗಿದೆ. ಇದಲ್ಲದೇ ಹೆದ್ದಾರಿ ಸಂಚಾರವನ್ನು ಸಹ ಒಂದು ದಿನದವರೆಗೆ ಬಂದ್ ಮಾಡಲಾಗಿದೆ.
ಕುಮಟಾದ ಬರ್ಗಿಯಲ್ಲಿ ನಡೆದಿತ್ತು ದುರಂತ ಕಳೆದ ಐದು ವರ್ಷದ ಹಿಂದೆ ಕುಮಟಾದ ಬರ್ಗಿ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಸ್ಫೋಟಗೊಂಡಿತ್ತು. ಈ ವೇಳೆ ಬರ್ಗಿಯ ಹೆದ್ದಾರಿ ಬಳಿ ಇದ್ದ ಮನೆಗಳು ಸಂಪೂರ್ಣ ಹೊತ್ತಿ ಉರಿದಿದ್ದು 13 ಜನ ಸಾವನ್ನಪ್ಪಿದ್ದರು. ಹೀಗಾಗಿ ಮತ್ತೆ ಇದೇ ಮಾದರಿಯಲ್ಲಿ ದುರಂತ ನಡೆಯಬಾರದು ಎಂಬ ಮುನ್ನೆಚ್ಚರಿಕೆಯಿಂದ ಕುಮಟಾ ಪೊಲೀಸರು ಹಂದಿಗೋಣ ಗ್ರಾಮದ ಹೆದ್ದಾರಿ ಬಳಿಯ ಸುತ್ತಮುತ್ತಲ ನಿವಾಸಿಗಳಿಗೆ ಬೇರೆಡೆ ತೆರಳಲು ಸೂಚಿಸಿದರು. ಸುತ್ತಮುತ್ತಲ ಜನರು ಮನೆ ಖಾಲಿ ಮಾಡಿ ಸಂಬಂಧಿಕರ ಮನೆಗೆ ತೆರಳಿದ್ದಾರೆ.
PublicNext
26/09/2020 09:59 pm