ಚೆನ್ನೈ: ಶೌಚಕ್ಕೆಂದು ಹೋಗಿದ್ದ ಸಂದರ್ಭದಲ್ಲಿ ಯುವತಿಯೊಬ್ಬಳು ಸೆಪ್ಟಿಕ್ ಟ್ಯಾಂಕ್ ಗೆ ಬಿದ್ದು ದುರಂತ ಸಾವು ಕಂಡ ಘಟನೆ ತಮಿಳುನಾಡಿನ ಕಾಂಚೀಪುರಂನಲ್ಲಿ ನಡೆದಿದೆ. ಶರಣ್ಯ (24) ಎಂಬಾಕೆಯೇ ಮೃತಪಟ್ಟ ದುರ್ದೈವಿಯಾಗಿದ್ದಾಳೆ. ಕೃಷಿ ಇಲಾಖೆಯ ಸರ್ಕಾರಿ ಗೋದಾಮಿನಲ್ಲಿ ವ್ಯವಸ್ಥಾಪಕಿಯಾಗಿ ಕೆಲಸ ಮಾಡುತ್ತಿದ್ದರು.
ಶರಣ್ಯ ತನ್ನ ಇಡೀ ಕುಟುಂಬವನ್ನು ನಿಭಾಯಿಸುತ್ತಿದ್ದರು. ಹೀಗಾಗಿ ತಂದೆ ಪಾಡು ಹೇಳತೀರದಾಗಿತ್ತು. ಶರಣ್ಯ ನನ್ನ ಜೀವ, ಆಕೆಯ ಸಾವನ್ನು ನನ್ನಿಂದ ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ. ನನ್ನ ಮಗಳು ಐಎಎಸ್ ಕನಸು ಕಂಡಿದ್ದಳು. ಕೆಲಸ ಮಾಡುತ್ತಲೇ ಐಎಎಸ್ ಗೆ ತಯಾರಾಗಲು ನಿರ್ಧರಿಸಿದ್ದಳು. ಆಕೆಯ ಕನಸು ಸಾವಿನೊಂದಿಗೆ ಕೊನೆಯಾಯಿತು ಎಂದು ಶರಣ್ಯ ತಂದೆ ಷಣ್ಮುಗಂ ಕಣ್ಣೀರು ಹಾಕಿದ್ದಾರೆ.
ಶರಣ್ಯ ಟಿಎಸ್‍ಪಿಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಇದೇ ವರ್ಷ ಮಾರ್ಚ್ ತಿಂಗಳಲ್ಲಿ ಸರ್ಕಾರಿ ಉದ್ಯೋಗಕ್ಕೆ ಸೇರಿಕೊಂಡಿದ್ದಳು. ಆಕೆ ಈ ಹಿಂದೆ ಒಂದು ಬಾರಿ ಕೆಲಸ ಬಿಡುವ ನಿರ್ಧಾರ ಕೂಡ ಮಾಡಿದ್ದಳು. ಪ್ರತಿ ದಿನ ಆಕೆ ತನ್ನ ಸಹೋದ್ಯೋಗಿಗಳ ಜೊತೆಯೇ ಶೌಚಕ್ಕೆ ಹೋಗುತ್ತಿದ್ದಳು. ಆದರೆ ಈ ಬಾರಿ ಯಾಕೆ ಹೀಗಾಯ್ತು ಅಂತ ಗೊತ್ತಾಗುತ್ತಿಲ್ಲ ಎಂದು ತಂದೆ ಅಳುತ್ತಲೇ ಹೇಳಿದರು.
ಕಚೇರಿ ಆವರಣದಲ್ಲಿಯೇ ಸರ್ಕಾರದ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಗಳ ಬಳಿ ಶರಣ್ಯ ಶನಿವಾರ ಶೌಚಕ್ಕೆ ತೆರಳಿದ್ದರು. ಸಣ್ಣ ಶೀಟ್ ನಿಂದ ಸೆಪ್ಟಿಕ್ ಟ್ಯಾಂಕ್ ಮುಚ್ಚಲಾಗಿತ್ತು. ಅದನ್ನು ತೆರೆದು ಸೂಸೂ ಮಾಡಬೇಕಿತ್ತು. ಅಂತೆಯೇ ಶರಣ್ಯ ಸೂಸು ಮಾಡಲೆಂದು ಕುಳಿತಾಗ ಆಕಸ್ಮಿಕವಾಗಿ ಕಾಲು ಜಾರಿ ಟ್ಯಾಂಕ್ ಒಳಗಡೆ ಬಿದ್ದಿದ್ದಾರೆ.
PublicNext
08/12/2020 10:11 am