ಬೈಂದೂರು : ಕಾಲ್ತೋಡು, ಹೇರೂರು, ಕಂಬದಕೊಣೆ, ಹೇರಂಜಾಲು ಗ್ರಾಮದ ನಡುವೆ ಹಾದು ಹೋಗುವ ಎಡಮಾವಿನ ಹೊಳೆಯ ಮಧ್ಯ ಹೇರಂಜಾಲಿನ ಗಡಿ ಭಾಗದಲ್ಲಿ ನಿರ್ಮಿಸಲು ಸಿದ್ಧಗೊಳ್ಳುತ್ತಿರುವ ಶ್ರೀ ಗುಡೇ ದೇವಸ್ಥಾನ ಏತ ನೀರಾವರಿ ಯೋಜನೆಯ ಬಗ್ಗೆ ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸದೇ ಸ್ಥಳೀಯ ರೈತರಿಗೆ ಅನ್ಯಾಯ ನಡೆಸಲಾಗುತ್ತಿದೆ ಎಂದು ಆರೋಪಿಸಿದ ರೈತರು ಮಂಗಳವಾರ ಬೆಳಿಗ್ಗೆ ಹೇರಂಜಾಲಿನ ಶ್ರೀ ಶಿವದುರ್ಗಾ ಸಾರ್ವಜನಿಕ ಗಣೇಶೋತ್ಸವ ಸಭಾಂಗಣ ಹಾಲು ಡೈರಿ ಹತ್ತಿರ ಕರೆಯಲಾಗಿದ್ದ ಗ್ರಾಮಸ್ಥರ ಮತ್ತು ಅಧಿಕಾರಿಗಳ ಸಭೆಯಲ್ಲಿ ಹೊಯ್ ಕೈ ನಡೆಯಿತು.
ಇಲ್ಲಿ ಆಗುತ್ತಿರುವ ಅಣೆಕಟ್ಟು ಹಾಗೂ ಜ್ಯಾಕ್‍ವೆಲ್ ಅವೈಜ್ಞಾನಿವಾಗಿದ್ದು, ರೈತರಿಗೆ ಮಾಹಿತಿ ನೀಡಿಲ್ಲ. ಗ್ರಾಮ ಪಂಚಾಯತ್‍ಗೆ 15 ದಿನಗಳ ಹಿಂದೆ ಮಾಹಿತಿ ನೀಡಲಾಗಿದೆ. ಅಚ್ಚುಕಟ್ಟು ಪ್ರದೇಶದ ರೈತರಿಗೆ ಈ ಬಗ್ಗೆ ಸೆಸ್ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಭೂಸ್ವಾಧೀನ ಪ್ರಕ್ರಿಯೆ ಆಗಿಲ್ಲ, ಸರ್ವೇ ಆಗಿಲ್ಲ, ನೀರು ನಿರ್ವಹಣೆ ಸಮಿತಿ ರಚನೆ ಮಾಡಿಲ್ಲ, ಮುಳುಗಡೆಯಾಗುವ ಗದ್ದೆಗಳಿಗೆ ಪರಿಹಾರ ಏನು? ಗೊತ್ತಿಲ್ಲ. ಅಧಿಕಾರಿಗಳು ಅವೈಜ್ಞಾನಿಕವಾಗಿ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಎಸ್.ಪ್ರಕಾಶ್ಚಂದ್ರ ಶೆಟ್ಟಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತಗೆದುಕೊಂಡರು.
ಇದೇ ಸಂದರ್ಭ ಮಧ್ಯ ಪ್ರವೇಶ ಮಾಡಿದ ಕಾಲ್ತೊಡು ವಿಜಯಶೆಟ್ಟಿ ಹಾಗೂ ತಂಡ, ಸಭೆಯಲ್ಲಿ ಅಧಿಕಾರಿಗಳಿಗೆ ಮಾತನಾಡಲು ಅವಕಾಶ ಕೊಡಿ ನೀವೇ ಮಾತನಾಡುತ್ತಿದ್ದರೆ ಅಧಿಕಾರಿಗಳು ಹೇಗೆ ಉತ್ತರಿಸಬೇಕು ಎಂದು ಆಕ್ಷೇಪ ವ್ಯಕ್ತಪಡಿಸಿದರು ಈ ಸಂದರ್ಭ ಮಾತಿಗೆ ಮಾತು ಬೆಳೆದು ಹೊಯ್ಕೈ ನಡೆಯಿತು. ಕಾಲ್ತೋಡು ವಿಜಯಶೆಟ್ಟಿ ಮಾತನಾಡಲು ಮೈಕ್ ಕೊಡಿ ಎಂದು ಪ್ರಕಾಶ್ ಚಂದ್ರ ಶೆಟ್ಟರ ಕೈಯಿಂದ ಕಿತ್ತುಕೊಂಡರು. ಈ ಸಂದರ್ಭ ಆಯತಪ್ಪಿದ ಪ್ರಕಾಶ್ ಚಂದ್ರ ಶೆಟ್ಟಿ ನೆಲಕ್ಕೆ ಬಿದ್ದರು. ಸ್ವಲ್ಪ ಸಮಯ ಗೊಂದಲದ ವಾತಾವರಣ ಸೃಷ್ಟಿಯಾಯಿತು.
ಇದೇ ಸಂದರ್ಭ ಶಾಸಕ ಗುರುರಾಜ್ ಗಂಟಿಹೊಳೆ ಆಗಮಿಸಿ ಅಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು. ಊರಿಗೆ ಯೋಜನೆಗಳನ್ನು ತರುವುದು ದೊಡ್ಡ ಕೆಲಸ. ಇದನ್ನು ವಿರೋಧಿಸುವ ಬದಲು ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಸಿ ಸಮರ್ಪಕವಾಗಿ ಅನುಷ್ಠಾನಗೊಳುವಂತೆ ನೋಡಿಕೊಳ್ಳುವ ಜವಾಬ್ದಾರಿ ಸಮಾಜದ ಮೇಲಿದೆ ಎಂದರು. ಯೋಜನೆಯ ಕುರಿತು ಜನರಿಗಿರುವ ಗೊಂದಲಗಳ ಬಗೆ ಹರಿಸಲು ಅಧಿಕಾರಿಗಳು ಆದ್ಯತೆ ನೀಡಬೇಕು ಎಂದು ಸೂಚಿಸಿದರು. ರೈತರ ಸಮಸ್ಯೆ ಬಗ್ಗೆ ಮಾಹಿತಿ ಪಡೆದ ಶಾಸಕರು ತಕ್ಷಣ ಸರಿಪಡಿಸಲು ಅಧಿಕಾರಿಗಳಿಗೆ ಆದೇಶಿಸಿದರು. ಸ್ಥಳೀಯರನ್ನು ಒಳಗೊಂಡ ಸಮತಿ ರಚನೆ ಮಾಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಶಾಸಕರು ತಿಳಿಸಿದರು. ಸಹಾಯಕ ಎಂಜಿನಿಯರ್ ಪುನೀತ್ ಯೋಜನೆಗಳ ಕುರಿತು ಮಾಹಿತಿ ನೀಡಿ ಗ್ರಾಮಸ್ಥರು ತಿಳಿಸುವ ಬದಲಾವಣೆಗಳನ್ನು ಮಾಡಲು ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಸಮಸ್ಯೆ ಉಂಟಾದರೆ ಗಮನಕ್ಕೆ ತಂದ ತಕ್ಷಣ ಸರಿಪಡಿಸುವ ಭರವಸೆ ನೀಡಿದರು.
PublicNext
04/02/2025 10:56 pm