ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

5ನೇ ಟಿ20ಯಲ್ಲೂ 150 ರನ್‌ಗಳಿಂದ ಸೋತ ಇಂಗ್ಲೆಂಡ್; 4-1 ಅಂತರದಿಂದ ಸರಣಿ ಗೆದ್ದ ಭಾರತ

ಮುಂಬೈ : ವಾಂಖೆಡೆ ಕ್ರೀಡಾಂಗಣದಲ್ಲಿ ರವಿವಾರ ನಡೆದ ಟಿ20 ಸರಣಿಯ ಐದನೇ ಮತ್ತು ಅಂತಿಮ ಪಂದ್ಯದಲ್ಲಿ ಭಾರತದ ಬ್ಯಾಟರ್ ಅಭಿಷೇಕ್ ಶರ್ಮ ಸಿಕ್ಸರ್‌ಗಳ ಸುರಿಮಳೆಗೈದು ಅಮೋಘ ಶತಕ ಸಿಡಿಸಿದರು. ಭಾರಿ ಮೊತ್ತ ಕಂಡು ಬೆದರಿದ ಬಳಿಕ ಭಾರತದ ಬೌಲರ್ ಗಳ ದಾಳಿಗೆ ನಲುಗಿದ ಆಂಗ್ಲರು 150 ರನ್ ಗಳ ಅಂತರದ ಭಾರೀ ಸೋಲಿಗೆ ಶರಣಾದರು. ಭಾರತ 4-1 ರಿಂದ ಸರಣಿ ಜಯಿಸಿತು.

ಇಂಗ್ಲೆಂಡ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಸಿಡಿದೆದ್ದ ಅಭಿಷೇಕ್ ಶರ್ಮ ಸಿಕ್ಸರ್‌ಗಳ ಸುರಿಮಳೆಗೈದರು. ಭಾರತೀಯ ಬ್ಯಾಟರ್‌ ಎರಡನೇ ವೇಗದ ಟಿ20 ಶತಕವನ್ನು ಗಳಿಸುವ ಮೂಲಕ ಇಂಗ್ಲೆಂಡ್ ಬೌಲರ್‌ಗಳ ದಾಳಿಯನ್ನು ಛಿದ್ರಗೊಳಿಸಿದರು. 9 ವಿಕೆಟ್‌ಗೆ 247 ರನ್‌ಗಳ ಬೃಹತ್ ಮೊತ್ತವನ್ನು ಭಾರತ ಕಲೆ ಹಾಕಿತು.

ಸಂಜು ಸ್ಯಾಮ್ಸನ್ 16, ತಿಲಕ್ ವರ್ಮ 24, ಮತ್ತೆ ವೈಫಲ್ಯ ಅನುಭವಿಸಿದ ನಾಯಕ ಸೂರ್ಯ ಕುಮಾರ್ ಯಾದವ್ 2 ರನ್ ಗೆ ನಿರ್ಗಮಿಸಿದರು. ಶಿವಂ ದುಬೆ 30, ಹಾರ್ದಿಕ್ ಪಾಂಡ್ಯ 9, ರಿಂಕು ಸಿಂಗ್ 9, ಅಕ್ಷರ್ ಪಟೇಲ್ 15, ಕೊಡುಗೆ ಸಲ್ಲಿಸಿದರು.

ಅಭಿಷೇಕ್ ಶರ್ಮ 37 ಎಸೆತಗಳಲ್ಲಿ ಶತಕ ಪೂರ್ಣ ಗೊಳಿಸಿದರು. 54 ಎಸೆತಗಳಲ್ಲಿ 135 ರನ್ ಚಚ್ಚಿದರು. 7ಬೌಂಡರಿ ಮತ್ತು 13 ಭರ್ಜರಿ ಸಿಕ್ಸರ್ ಗಳನ್ನು ಸಿಡಿಸಿದರು. ಡೇವಿಡ್ ಮಿಲ್ಲರ್ ಮತ್ತು ರೋಹಿತ್ ಶರ್ಮ 35 ಎಸೆತಗಳಲ್ಲಿ ಟಿ20 ಶತಕ ಸಿಡಿಸಿದ ದಾಖಲೆ ಜಂಟಿಯಾಗಿ ಹೊಂದಿದ್ದಾರೆ.

ಬೃಹತ್ ಮೊತ್ತ ಗುರಿ ಬೆನ್ನಟ್ಟಿದ ಆಂಗ್ಲರು ಆರಂಭದಲ್ಲಿ ಅಬ್ಬರಿಸಲು ಆರಂಭಿಸಿದರು. ಫಿಲಿಪ್ ಸಾಲ್ಟ್ 55 ರನ್ ಗಳಿಸಿ ಔಟಾದ ಬಳಿಕ ಯಾರೂ ಹೆಚ್ಚು ಹೊತ್ತು ನಿಲ್ಲಲಿಲ್ಲ.10.3 ಓವರ್ ಗಳಲ್ಲಿ 97 ಕ್ಕೆ ಆಲೌಟಾದರು.

ಶಮಿ 3 ವಿಕೆಟ್ ಕಿತ್ತರೆ, ವರುಣ್ ಚಕ್ರವರ್ತಿ, ಶಿವಂ ದುಬೆ ಮತ್ತು ಅಭಿಷೇಕ್ ಶರ್ಮ ತಲಾ 2 ವಿಕೆಟ್ ಪಡೆದರು. ರವಿ ಬಿಷ್ಣೋಯಿ 1 ವಿಕೆಟ್ ಕಿತ್ತರು.

Edited By :
PublicNext

PublicNext

02/02/2025 10:42 pm

Cinque Terre

18.46 K

Cinque Terre

2