ಬೀದರ್ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ 8ನೇ ಐತಿಹಾಸಿಕ ಬಜೆಟ್ ಮಂಡಿಸಿದ್ದಾರೆ. ಇದರಲ್ಲಿ ಜನಸಾಮಾನ್ಯರು, ಬಡವರು ಮತ್ತು ರೈತರ ಏಳಿಗೆಗೆ ಒತ್ತು ನೀಡಿದ್ದಾರೆ ಎಂದು ಶಾಸಕ ಪ್ರಭು.ಬಿ ಚವ್ಹಾಣ ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತತ್ವದ ಸರ್ಕಾರವು ಭಾರತವನ್ನು ವಿಶ್ವದ ಮುಂಚೂಣಿ ರಾಷ್ಟ್ರವಾಗಿಸುವ ಸಂಕಲ್ಪದೊಂದಿಗೆ ಕೆಲಸ ಮಾಡುತ್ತಿದೆ. ಶಿಕ್ಷಣ, ಕೃಷಿ, ಕೈಗಾರಿಕೆ, ವೈದ್ಯಕೀಯ, ಪ್ರವಾಸೋದ್ಯಮ ಸೇರಿದಂತೆ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಪ್ರಯತ್ನಿಸುತ್ತಿದೆ ಎಂದಿದ್ದಾರೆ.
ಭಾರತವು ಜಾಗತಿಕಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ದೇಶದ 120 ಸ್ಥಳಗಳಿಗೆ ಉಡಾನ್ ವಿಮಾನಯಾನ ಸೌಲಭ್ಯ ಕಲ್ಪಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. 12 ಲಕ್ಷ ರೂ. ವರೆಗೆ ಆದಾಯ ತೆರಿಗೆ ವಿನಾಯಿತಿ ನೀಡಿರುವುದು ಮಧ್ಯಮ ವರ್ಗದ ಜನತೆಗೆ ಸಾಕಷ್ಟು ಅನುಕೂಲವಾಗಲಿದೆ. ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿರುವುದು ಕ್ಯಾನ್ಸರ್ ಪೀಡಿತರಿಗೆ ವರದಾನವಾಗಿ ಪರಿಣಮಿಸಲಿದೆ ಎಂದು ತಿಳಿಸಿದ್ದಾರೆ.
ರೈತರಿಗಾಗಿ ಪ್ರಧಾನಮಂತ್ರಿ ಧನ್ ಧಾನ್ಯ ಕೃಷಿ ಯೋಜನೆ ಘೋಷಿಸಿದ್ದು, ಅಸ್ಥಿತ್ವದಲ್ಲಿರುವ ಯೋಜನೆಗಳು ಮತ್ತು ವಿಶೇಷ ಉಪಕ್ರಮಗಳ ಮೂಲಕ 1 ಕೋಟಿಗೂ ಅಧಿಕ ರೈತರಿಗೆ ಸಹಾಯವಾಗಲಿದೆ. ಮುಂದಿನ ವರ್ಷದಿಂದ ವೈದ್ಯಕೀಯ ಕಾಲೇಜುಗಳಲ್ಲಿ 10 ಸಾವಿರ ಸೀಟುಗಳ ಹೆಚ್ಚಳ, 50 ಸಾವಿರ ಶಾಲೆಗಳಲ್ಲಿ ಅಟಲ್ ಟಿಂಕರಿಮಗ್ ಲ್ಯಾಬ್‌ಗಳ ಸ್ಥಾಪನೆ, ಗ್ರಾಮೀಣ ಪ್ರದೇಶದಲ್ಲಿನ ಎಲ್ಲ ಸರ್ಕಾರಿ ಮಾಧ್ಯಮಿಕ ಶಾಲೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕ ವಿಸ್ತರಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಕಸಿತ ಭಾರತದ ಸಂಕಲ್ಪದೊಂದಿಗೆ ಕೆಲಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಎಲ್ಲ ಕೇಂದ್ರ ಸಚಿವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
PublicNext
01/02/2025 06:37 pm