ಸಾಗರ : ಫೆ. 4ರಂದು ಆರೋಗ್ಯ ಹಕ್ಕಿನ ಜಾಥಾ ಮೂಲಕ ಆರೋಗ್ಯ ಕುರಿತು ಜಾಗೃತಿ ಮತ್ತು ರಾಜ್ಯದಲ್ಲಿ ಹೆಚ್ಚುತ್ತಿರುವ ಬಾಣಂತಿಯರು, ಮಕ್ಕಳ ಸಾವಿನ ವಿರುದ್ದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ನಾಗರಾಜ್ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 10ಕ್ಕೆ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಿಂದ ಹೊರಟ ಜಾಥಾವು ನಗರದ ಪ್ರಮುಖಬೀದಿಗಳಲ್ಲಿ ಸಂಚರಿಸಿ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದರು.
ದಿನದಿಂದ ದಿನಕ್ಕೆ ರಾಜ್ಯದಲ್ಲಿ ಬಾಣಂತಿಯರು, ಶಿಶುಗಳ ಸಾವಿನ ಸಂಖ್ಯೆ ಜಾಸ್ತಿಯಾಗುತ್ತಿದೆ. ಇದಕ್ಕೆ ವೈದ್ಯರ ನಿರ್ಲಕ್ಷö್ಯ ಹಾಗೂ ಕಳಪೆ ಗುಣಮಟ್ಟದ ಔಷಧಿ ಬಳಕೆಯೆ ಕಾರಣ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಬಳ್ಳಾರಿ, ರಾಯಚೂರು ಇನ್ನಿತರೆ ಜಿಲ್ಲಾಸ್ಪತ್ರೆಗಳಲ್ಲಿ ಗುಣಮಟ್ಟವಿಲ್ಲದ ಔಷದಿಯನ್ನು ಬಾಣಂತಿಯರಿಗೆ ನೀಡಿದ್ದರಿಂದಲೆ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಜನಾದೇಶವನ್ನು ಕ್ರೋಢಿಕರಿಸುವುದು ಜಾಥಾದ ಪ್ರಮುಖ ಉದ್ದೇಶವಾಗಿದೆ. ರಾಜ್ಯಕ್ಕೆ ಬಂಗಾಳ ಮೂಲದ ಔಷಧಿ ಕಂಪನಿಯಿಂದ ಕಳಪೆ ಗುಣಮಟ್ಟದ ಔಷಧಿಯನ್ನು ಪೂರೈಕೆ ಮಾಡಲಾಗಿದೆ. ತಾಯಂದಿರ ಮೇಲೆ ಔಷಧಿ ಪ್ರಯೋಗಿಸುವ ಮುನ್ನ ಗುಣಮಟ್ಟವನ್ನು ವೈದ್ಯರು, ಅಧಿಕಾರಿಗಳು ಪರಿಶೀಲನೆ ಮಾಡಿಲ್ಲ. ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಮತ್ತು ನಿರ್ಲಕ್ಷö್ಯ ತೋರಿದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಹೊರಗಿನಿಂದ ಔಷಧಿ ತರಲು ಚೀಟಿ ಬರೆದುಕೊಡುವುದನ್ನು ಮೊದಲು ನಿಲ್ಲಿಸಬೇಕು. ಡ್ರಗ್ಸ್ ಅಕ್ಷನ್ ಫೋರಂ ಕರ್ನಾಟಕ ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿ ಪೂರೈಕೆ ಮಾಡುವಲ್ಲಿ ವಿಫಲವಾಗಿದೆ. ತಮಿಳುನಾಡು, ಕೇರಳ, ರಾಜಸ್ತಾನದಲ್ಲಿ ಯೋಜನೆ ಯಶಸ್ವಿಯಾಗಿದೆ. ಆರೋಗ್ಯ ಸಚಿವರು ಯೋಜನೆ ಯಶಸ್ವಿಯಾಗಿ ಅನುಷ್ಟಾನಕ್ಕೆ ತರಬೇಕು ಸೇರಿದಂತೆ ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಆರೋಗ್ಯ ಹಕ್ಕಿನ ಜಾಥಾ ನಡೆಸಲಾಗುತ್ತಿದೆ ಎಂದರು.
ಅರಣ್ಯಮೂಲ ಬುಡಕಟ್ಟು ಒಕ್ಕೂಟದ ಸಂಚಾಲಕ ರಾಮಣ್ಣ ಹಸಲರು ಮಾತನಾಡಿ, ರಾಜ್ಯದ 10 ಜಿಲ್ಲೆಗಳಲ್ಲಿ ಫೆ. 3ರಿಂದ ಜಾಥಾ ಪ್ರಾರಂಭವಾಗಲಿದ್ದು, ಫೆ. 14ರಂದು ಬೆಂಗಳೂರಿನಲ್ಲಿ ಸಮಾಪ್ತಿಗೊಳ್ಳಲಿದೆ. ಸಾಗರದಲ್ಲಿ ಫೆ. ೪ರಂದು ನಡೆಯಲಿರುವ ಜಾಥಾದಲ್ಲಿ ಸಾಗರ, ತೀರ್ಥಹಳ್ಳಿ, ಹೊಸನಗರ ಭಾಗದವರು ಪಾಲ್ಗೊಳ್ಳಲಿದ್ದಾರೆ. ಜೊತೆಗೆ ವಿವಿಧ ಸಂಘಸಂಸ್ಥೆಗಳು ಈ ಜಾಥಾಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಗೋಷ್ಟಿಯಲ್ಲಿ ಲಕ್ಷಮ್ಮ ಹಿರೇಮನೆ, ಮುರುಗೇಶ್, ವೀರೇಶ್ ಹಾಜರಿದ್ದರು.
Kshetra Samachara
31/01/2025 04:54 pm