ಸಾಗರ : ನಗರವ್ಯಾಪ್ತಿಯ 31 ವಾರ್ಡ್ಗಳಲ್ಲಿ ಸಮರ್ಪಕ ಕಸ ವಿಲೇವಾರಿ, ಕುಡಿಯುವ ನೀರು ಸರಬರಾಜಿಗೆ ಒತ್ತಾಯಿಸಿ ಶುಕ್ರವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಲಾಯಿತು.
ನಗರದ 31 ವಾರ್ಡ್ಗಳಲ್ಲಿ ಜನರಿಗೆ ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಕೆ ಮಾಡುತ್ತಿಲ್ಲ.ನಗರಸಭೆ ಅಧಿಕಾರಿಗಳನ್ನು ವಿಚಾರಿಸಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ.
ನಗರವ್ಯಾಪ್ತಿಯ ಶಿವಮೊಗ್ಗ ರಸ್ತೆ, ಭೀಮನಕೋಣೆ ರಸ್ತೆ, ಅಯ್ಯಪ್ಪ ಸ್ವಾಮಿ ದೇವಸ್ಥಾನ ಹಿಂಭಾಗ, ಅಂಬೇಡ್ಕರ್ ಭವನ, ಗಣಪತಿ ಕೆರೆ, ವಿನೋಬಾ ನಗರ, ಖಾಸಗಿ ಬಸ್ ನಿಲ್ದಾಣ, ತಿಮ್ಮಣ್ಣ ನಾಯಕನ ಕೆರೆ, ಕಾಗೋಡು ತಿಮ್ಮಪ್ಪ ಬಡಾವಣೆ ಸೇರಿದಂತೆ ಬೇರೆಬೇರೆ ಭಾಗಗಳಲ್ಲಿ ಕಸದ ರಾಶಿರಾಶಿ ಬಿದ್ದಿದ್ದು, ಸಾರ್ವಜನಿಕರು ಸಾಂಕ್ರಾಮಿಕ ರೋಗಭೀತಿ ಎದುರಿಸುತ್ತಿದ್ದಾರೆ. ಪ್ರತಿದಿನ ಬೆಳಿಗ್ಗೆ ವಾರ್ಡ್ ಭೇಟಿ ಕೊಡಬೇಕಾಗಿದ್ದ ಪೌರಾಯುಕ್ತರು ತಮ್ಮ ಕರ್ತವ್ಯ ಮರೆತಿದ್ದಾರೆ. ಅಧಿಕಾರಿಗಳು ಸಹ ಸ್ವಚ್ಚತೆ ಬಗ್ಗೆ ಗಮನ ಹರಿಸುತ್ತಿಲ್ಲ. ಸಾರ್ವಜನಿಕರು ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಬೀದಿದೀಪ ನಿರ್ವಹಣೆಯಲ್ಲಿ ಸಹ ನಗರಸಭೆ ಸಂಪೂರ್ಣ ವಿಫಲಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ತಕ್ಷಣ ಸಮರ್ಪಕ ಕುಡಿಯುವ ನೀರು, ಸ್ವಚ್ಚತೆ ಮತ್ತು ಬೀದಿದೀಪ ನಿರ್ವಹಣೆ ಕುರಿತು ನಗರಸಭೆ ಆಡಳಿತ ಕ್ರಮ ತೆಗೆದುಕೊಳ್ಳದೆ ಹೋದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರಸಭೆ ಎದುರು ಅನಿರ್ಧಿಷ್ಟಾವಧಿ ಧರಣಿ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಸಮಿತಿ ತಾಲ್ಲೂಕು ಸಂಚಾಲಕ ರೇವಪ್ಪ ಕೆ. ಹೊಸಕೊಪ್ಪ ಮಾತನಾಡಿದರು. ಪ್ರತಿಭಟನೆಯಲ್ಲಿ ಗಣಪತಿ ವಡ್ನಾಲ, ಅಣ್ಣಪ್ಪ ಪೂಜಾರಿ, ಉಮಾ, ಕನ್ನಪ್ಪ, ಪ್ರಶಾಂತ್, ಜಗನ್ನಾಥ್, ಜಾನ್ಸನ್ ಲೋಬೋ, ರವಿಕುಮಾರ್, ಮಹಾಬಲ ಪೂಜಾರಿ ಇನ್ನಿತರರು ಹಾಜರಿದ್ದರು.
Kshetra Samachara
31/01/2025 03:56 pm