ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಸುಸಜ್ಜಿತ ಜಿಲ್ಲಾಸ್ಪತ್ರೆ ಸಿದ್ಧ : ವೈದ್ಯರು, ಸಿಬ್ಬಂದಿ ಮಂಜೂರಾತಿಯೇ ಸವಾಲು !

ಉಡುಪಿ : ಹಿಂದಿನ ಸರ್ಕಾರದ ಅವಧಿಯಲ್ಲಿ ಉಡುಪಿಗೆ ನೂತನ ,ಸುಸಜ್ಜಿತ ಜಿಲ್ಲಾಸ್ಪತ್ರೆ ಕಟ್ಟಡ ಮಂಜೂರಾಗಿತ್ತು.ಇದೀಗ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದೆ. ಶೇಕಡ 80 ರಷ್ಟು ಕಾಮಗಾರಿಯೂ ಪೂರ್ಣಗೊಂಡಿದೆ. ಇಷ್ಟು ಹೊತ್ತಿಗೆ ಸಿಬ್ಬಂದಿಗಳ ನೇಮಕಾತಿ ಆಗಬೇಕಿತ್ತು, ಆದರೆ ಸಿಬ್ಬಂದಿ ನೇಮಕಾತಿಯೂ ಆಗಿಲ್ಲ ಉದ್ಘಾಟನೆಗೂ ದಿನಾಂಕವೂ ನಿಗದಿಯಾಗಿಲ್ಲ!

ಉಡುಪಿ ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆ ಏರಿಸುವ ಕನಸು ಹಲವು ವರ್ಷಗಳದ್ದು.ಈಗ ಇರುವ ಉಡುಪಿಯ ಜಿಲ್ಲಾಸ್ಪತ್ರೆ ಅಕ್ಷರಶಃ ಐಸಿಯುನಲ್ಲಿದೆ! ಅಲ್ಲಿ ಯಾವ ಚಿಕಿತ್ಸೆಯೂ ಸುಸೂತ್ರವಾಗಿ ನಡೆಯುತ್ತಿಲ್ಲ.ಇದನ್ನು ಮನಗಂಡು ಆರು ಮಹಡಿಯ ಈ ಅತ್ಯಾಕರ್ಷಕ ಕಟ್ಟಡ ನಿರ್ಮಾಣ ಮಾಡಲಾಗಿದೆ. ದುರಂತ ಎಂದರೆ ನಿರ್ಮಾಣವಾದ ಕಟ್ಟಡದ ಉದ್ಘಾಟನೆಯ ದಿನಕ್ಕಾಗಿ ಹಾಗೂ ವೈದ್ಯರು- ಸಿಬ್ಬಂದಿ ನೇಮಕಾತಿಗಾಗಿ ಈಗ ಕಾಯಬೇಕಾಗಿದೆ.

ನೂತನ ಜಿಲ್ಲಾಸ್ಪತ್ರೆ ಕಟ್ಟಡದ ವೆಚ್ಚ 155 ಕೋಟಿ ರೂ. ಕೇಂದ್ರ ಸರ್ಕಾರದಿಂದ 16 ಕೋಟಿ ವೆಚ್ಚದ ಕ್ರಿಟಿಕಲ್ ಕೇರ್ ಸೆಂಟರ್ ಮಂಜೂರಾಗಿದೆ.ಆದರೆ ಸಿಬ್ಬಂದಿಗಳದ್ದೇ ತಲೆನೋವಾಗಿದೆ.ಸುಸಜ್ಜಿತ ಆಸ್ಪತ್ರೆಗೆ ವೈದ್ಯರು ,ಸಿಬ್ಬಂದಿ ಬೇಡವೆ? ಆಸ್ಪತ್ರೆಗೆ ವೈದ್ಯರು ಸಿಬ್ಬಂದಿ ನೇಮಕಾತಿ ಪ್ರಸ್ತಾಪ ಇಟ್ಟಿದ್ದರೂ ಅದಿನ್ನೂ ಮಂಜೂರೇ ಆಗಿಲ್ಲ.

ಇನ್ನು ಆಸ್ಪತ್ರೆಗೆ ಬೇಕಾದ ಪರಿಕರಗಳು ಕೂಡ ಮಂಜೂರಾಗಿಲ್ಲ.ಒಟ್ಟು 300 ಬೆಡ್ ವ್ಯವಸ್ಥೆ ನೂತನ ಆಸ್ಪತ್ರೆಯಲ್ಲಿದೆ.ಈಗಿನ ಹಳೆ ಆಸ್ಪತ್ರೆಯಲ್ಲಿ ಖಾಯಂ ವೈದ್ಯರು ,ತಜ್ಞರು, ಶುಶ್ರೂಶಕಿಯರ ಕೊರತೆ ಇದೆ.ಇನ್ನು ಕ್ರಿಟಿಕಲ್ ಕೇರ್ ಸೆಂಟರ್ ಗೆ 9 ವೈದ್ಯರ ಅಗತ್ಯ ಇದೆ.

ಈಗಿರುವ ಜಿಲ್ಲಾಸ್ಪತ್ರೆಯಲ್ಲಿ ಎನ್ಎಚ್ಎಂ ಗುತ್ತಿಗೆ ಆಧಾರದ ನೌಕರರು ಕೆಲಸ ಮಾಡುತ್ತಿದ್ದರೆ, ಶೇಕಡ 50 ಡಿ ಗ್ರೂಪ್ ನೌಕರರ ಕೊರತೆ ಎದುರಿಸುತ್ತಿದೆ.ಈ ಕೊರತೆಗಳನ್ನು ನೀಗಿಸಿ , ಅತ್ಯಾಧುನಿಕ ಪರಿಕರ ಮತ್ತು ಸೌಲಭ್ಯಗಳನ್ನು ಅಳವಡಿಸಬೇಕಾಗಿದೆ.ಸರಕಾರ ಇತ್ತ ಕಡೆ ಗಮನ ಹರಿಸಿ ಬಡಜನರ ಚಿಕಿತ್ಸೆಗೆ ಅನುಕೂಲ ಮಾಡಿಕೊಡಬೇಕು ಎಂಬುದೇ ಉಡುಪಿಯ ಸಾರ್ವಜನಿಕರ ಆಶಯವಾಗಿದೆ.

ವಿಶೇಷ ವರದಿ; ರಹೀಂ ಉಜಿರೆ

Edited By :
PublicNext

PublicNext

30/01/2025 04:45 pm

Cinque Terre

13.09 K

Cinque Terre

0