ಬೆಂಗಳೂರು: ಸಾಲಗಾರರ ಕಿರುಕುಳ ತಾಳಲಾರದೆ ವ್ಯಕ್ತಿಯೋರ್ವ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಅರುಣ್ (38) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತನ ತಂದೆ ದೇವರಾಜ್ ನೀಡಿದ ದೂರಿನ ಮೇರೆಗೆ ಸಾಲ ನೀಡಿದ್ದ ದಿನೇಶ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರಕಾಶ್ ನಗರದಲ್ಲಿ ಕಳೆದ 20 ವರ್ಷಗಳಿಂದ ಅರುಣ್ ವಾಸಿಸುತ್ತಿದ್ದು ಪತ್ನಿ ಹಾಗೂ ಇಬ್ಬರ ಮಕ್ಕಳಿದ್ದಾರೆ. ಇತ್ತೀಚೆಗೆ ವ್ಯವಹಾರದ ಸಲುವಾಗಿ ಹಣದ ಅಗತ್ಯ ಹಿನ್ನೆಲೆಯಲ್ಲಿ ಪೂಜಾ ಎಂಟರ್ ಪ್ರೈಸಸ್ ಹೆಸರಿನಲ್ಲಿ ಫೈನಾನ್ಸ್ ನಡೆಸುತ್ತಿದ್ದ ದಿನೇಶ್ ನನ್ನ 15 ದಿನಗಳ ಹಿಂದೆ ಭೇಟಿ ಮಾಡಿದ ಅರುಣ್ 6 ಲಕ್ಷ ಸಾಲ ಪಡೆದುಕೊಂಡಿದ್ದರು. ಇದಕ್ಕೆ ಶ್ಯೂರಿಟಿಯಾಗಿ ಕಾರನ್ನ ಆತನಿಗೆ ಒಪ್ಪಿಸಿದ್ದರು. ವಾಯಿದೆಯಂತೆ 6 ಲಕ್ಷ ಹಣ ಹೊಂದಿಸಲು ಸಾಧ್ಯವಾಗದೆ 1.50 ಲಕ್ಷ ಹಣವನ್ನು ಅರುಣ್ ನೀಡಲು ಮುಂದಾದಾಗ ಧಮಕಿ ಹಾಕಿರುವುದಾಗಿ ದಿನೇಶ್ ವಿರುದ್ಧ ಮೃತನ ತಂದೆ ದೂರಿನಲ್ಲಿ ಆರೋಪಿಸಿದ್ದಾರೆ.
ನಿಗದಿತ ಅವಧಿಯೊಳಗೆ ನೀಡಲು ಸಾಧ್ಯವಾಗದ ಅರುಣ್‌ನನ್ನ ತಮ್ಮ ಅಂಗಡಿಗೆ ಕರೆಯಿಸಿ ದಿನೇಶ್ ಧಮಕಿ ಹಾಕಿದ್ದ. ಕೈಯಿಂದ ಹೊಡೆದು ಹಲ್ಲೆ ಮಾಡಿದ್ದ. ಹಣ ವಾಪಸ್ ನೀಡಲು ಆಗದಿದ್ದರೆ ನೇಣು ಹಾಕಿಕೊಂಡು ಸಾಯಿ ಎಂದು ಹೀಯಾಳಿಸಿದ್ದ. ಆದಷ್ಟು ಬೇಗ ಹಣ ನೀಡದಿದ್ದರೆ ಜೀವಸಮೇತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬೆದರಿಕೆಗೆ ಭಯಗೊಂಡ ಅರುಣ್ ಹೆಂಡತಿ-ಮಕ್ಕಳನ್ನ ಸಹೋದರನ ಮನೆಯಲ್ಲಿ ಇರಿಸಿ ಜನವರಿ 23 ರಂದು ರಾತ್ರಿ ಮನೆಯಲ್ಲಿ ನೇಣುಬಿಗಿದುಕೊಂಡು ಅರುಣ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನ ತಂದೆ ನೀಡಿದ ದೂರು ಆಧರಿಸಿ ದಿನೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
PublicNext
30/01/2025 12:21 pm