ಮಡಿಕೇರಿ: ಕಳೆದ ಹಲವು ದಿನಗಳಿಂದ ಶಾಂತವಾಗಿದ್ದ ಕೊಡಗಿನ ಕಟ್ಟೆಮಾಡು ದೇವಾಲಯ ವಿಚಾರ ಮತ್ತೆ ಭುಗಿಲೆದ್ದಿದೆ. ಇಬ್ಬರು ಕಟ್ಟೆಮಾಡು ದೇವಾಲಯದ ಅರ್ಚಕರ ಮೇಲೆ ಹಲ್ಲೆ ನಡೆಸಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೊಡಗು ಜಿಲ್ಲೆ ಮಡಿಕೇರಿ ಹೊರವಲಯದ ಕಟ್ಟೆಮಾಡು ಮೃತ್ಯುಂಜಯ ದೇವಾಲಯದಲ್ಲಿ ಸಾಂಪ್ರದಾಯಿಕ ವಸ್ತ್ರ ತೊಡುವ ವಿಚಾರವಾಗಿ ಗಲಾಟೆ ಎದ್ದಿದ್ದು, ಕಳೆದ ಹಲವು ದಿನಗಳಿಂದ ಶಾಂತವಾಗಿತ್ತು. ಆದ್ರೆ, ಇಂದು ಕಾಕೋಟು ಪರಂಬು ಗ್ರಾಮದ ಅನಿಲ್ ಹಾಗೂ ಆತನ ಸಹಚರರಿಬ್ಬರು ಅರ್ಚಕರ ಮನೆಯಾದ ಮೂರ್ನಾಡು ಗ್ರಾಮದ ಮನೆಗೆ ಭೇಟಿ ನೀಡಿದ್ದು, ಹೊಸ ಮನೆಗೆ ಗುತ್ತಿ ಹಾಕುವ ವಿಚಾರವಾಗಿ ಮಾತನಾಡಲು ಮನೆಯ ಹೊರಕ್ಕೆ ಕರೆದಿದ್ದಾರೆ.
ಅರ್ಚಕ ವಿಘ್ನೇಶ್ ಭಟ್ ಮನೆಯಿಂದ ಹೊರ ಬರುತ್ತಿದಂತೆಯೇ ಅರ್ಚಕರ ಮೇಲೆ ಹಲ್ಲೆ ಮಾಡಿದ್ದಾರೆ ಹಾಗೂ ತಡೆಯಲು ಬಂದ ಅವರ ತಾಯಿ ಗೀತಾ ಅವರ ಮೇಲೆಯೂ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ಅರ್ಚಕರನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಸೇರಿಸಿದ್ದು, ಹೆಚ್ಚಿನ ಚಿಕಿತ್ಸೆ ನಡೆಯುತ್ತಿದೆ.
ಕಟ್ಟೆಮಾಡು ದೇವಾಲಯದ ಹಳೆಯ ವಿಚಾರದಿಂದಲೆ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರ್ಚಕ ವಿಘ್ನೇಶ್ ಭಟ್ ಆರೋಪಿಸಿದ್ದಾರೆ. ಆಸ್ಪತ್ರೆಗೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಕೂಡ ಆಸ್ಪತ್ರೆ ಮುಂದೆ ಜಮಾಯಿಸಿದ್ದಾರೆ. ಕೂಲ್ ಆಗಿದ್ದ ಕೊಡಗಿನಲ್ಲಿ ಮತ್ತೆ ಆಕ್ರೋಶ ಭುಗಿಲೆದ್ದಿದೆ.
PublicNext
27/01/2025 09:01 pm