ಹಾಸನ: ನಗರಸಭೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಮನೆ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಕ್ರಮ ವಹಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಹಾಸನ ನಗರಸಭೆಯ ವಾರ್ಡ್ ನಂಬರ್ 30 ಮತ್ತು 31ರ ವಾರ್ಡ್ ಮಧ್ಯೆ ಇರುವ ಕೊಳಚೆ ನಿರ್ಮೂಲನ ಮಂಡಳಿಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಮನೆ ಕಟ್ಟಡ ನಿರ್ಮಾಣ ಕಾರ್ಯ ಮಾಡಲಾಗುತ್ತಿದೆ. ಈ ಹಿಂದೆ ಅಂದರೆ 2018ರಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡುತ್ತಿದ್ದರು. ಆಗ ಅಂದಿನ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರಿಂದ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ಮತ್ತೆ ಇದೇ ಜಾಗದಲ್ಲಿ ಮನೆ ನಿರ್ಮಾಣ ಮಾಡಲಾಗುತ್ತಿದೆ.
ಈ ಜಾಗ ಚರಂಡಿಯ ಕಸ ತೆಗೆಯಲು ಜೆ.ಸಿ.ಬಿ ಇಳಿಯುವ ಜಾಗವಾಗಿದ್ದು, ಚರಂಡಿಯಲ್ಲಿ ಕಸ, ಮಣ್ಣು ಹಾಗೂ ಇತರೆ ತ್ಯಾಜ್ಯ ತೆಗೆದು ಹಾಕಲು ಜಾಗವನ್ನು ಬಿಡದೆ ಮನೆ ಕಟ್ಟುತ್ತಿದ್ದಾರೆ. ಈ ಜಾಗದಲ್ಲಿ ಕಸ ವಿಲೇವಾರಿ ಮಾಡಲು ಜಾಗವನ್ನೂ ಕೂಡ ಬಿಟ್ಟಿಲ್ಲ. ಇದರಿಂದ ಅಂಬೇಡ್ಕರ್ ನಗರದಲ್ಲಿ ವಾಸವಿರುವ ನಿವಾಸಿಗಳಿಗೆ ಚರಂಡಿಯ ನೀರು ಮನೆಗೆ ನುಗ್ಗುವ ಸಾಧ್ಯತೆ ಇದೆ. ಆದ್ದರಿಂದ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಮನೆ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿದ್ದಾರೆ.
PublicNext
27/01/2025 09:14 am