ಹೊಳಲ್ಕೆರೆ : ಕ್ಷೇತ್ರದ ಅಭಿವೃದ್ಧಿಯೇ ಮೊದಲ ಕೆಲಸ ಹಾಗೂ ಸಾರ್ವಜನಿಕರ ಜೀವನವನ್ನು ಸ್ವಂತ ಬದುಕೆಂದು ಅರ್ಥಮಾಡಿಕೊಂಡು ಎಲ್ಲಿ ಏನು ಅಭಿವೃದ್ದಿ ಕೈಗೊಂಡರೆ ಕ್ಷೇತ್ರದ ಜನರಿಗೆ ಒಳ್ಳೆಯದಾಗುತ್ತದೆಂಬ ಅರಿವಿಟ್ಟುಕೊಂಡಿರುವ ರಾಜಕಾರಣಿ ನಾನು ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.
ವಿಧಾನಸಭಾ ಕ್ಷೇತ್ರದ ಭರಮಸಾಗರ ಹೋಬಳಿ ಅರಬಗಟ್ಟ ಗ್ರಾಮದಲ್ಲಿ 1.15 ಕೋಟಿ ರೂ.ವೆಚ್ಚದಲ್ಲಿ ಶಾಂತಿವನದಿಂದ ಭರಮಸಾಗರದವರೆಗೂ ನೂತನ ಡಾಂಬರ್ ರಸ್ತೆ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.
ಸಿರಿಗೆರೆಯ ಪೂಜ್ಯರು ಓಡಾಡುವ ರಸ್ತೆ ಚೆನ್ನಾಗಿರಬೇಕೆಂದು ಒಂದು ಕೋಟಿ ರೂ.ಗಳನ್ನು ನೀಡಿದ್ದೇನೆ. ಭರಮಸಾಗರ ಕೆರೆ ಏರಿ ಅಭಿವೃದ್ದಿಗೆ ಆರು ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, ಮುಂದಿನ ಶನಿವಾರ ಭೂಮಿ ಪೂಜೆ ನೆರವೇರಿಸುತ್ತೇನೆ. ಸರ್ಕಾರದಲ್ಲಿ ಹಣವಿಲ್ಲದ ಸಮಯದಲ್ಲಿ ಅನುದಾನ ತಂದು ಅಭಿವೃದ್ದಿಪಡಿಸುವ ತಾಕತ್ತು ನನ್ನದು. ನೀವುಗಳು ನನ್ನ ಮೇಲಿಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಕೆಲಸ ಮಾಡುತ್ತೇನೆಂದು ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ ಪ್ರದೀಪ್, ಮಾಜಿ ಅಧ್ಯಕ್ಷ ಮೋಹನ್, ಭರಮಸಾಗರ ಬಿಜೆಪಿ.ಮಂಡಲ ಅಧ್ಯಕ್ಷ ಶೈಲೇಶ್, ಕಲ್ಲೇಶ್, ತಿಪ್ಪಣ್ಣ, ಸಿದ್ದಲಿಂಗಣ್ಣ, ನಾಗೇಂದ್ರಣ್ಣ, ಧಾನ್ಯನಾಯ್ಕ ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿದ್ದರು.
PublicNext
20/01/2025 06:04 pm