ಕೋಲಾರ : ವಕೀಲ ವೃತ್ತಿ ಆಯ್ಕೆ ಮಾಡಿಕೊಂಡವರು ನಿರಂತರ ಅಧ್ಯಯನ ಮಾಡಿ ಕೌಶಲ್ಯ ಹೆಚ್ಚಿಸಿಕೊಳ್ಳಿ ಮತ್ತು ವೃತ್ತಿ ಘನತೆಗೆ ಧಕ್ಕೆಯಾಗದಂತೆ ನಿಮ್ಮ ನಡೆ ಇರಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರೂ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿ.ಎ.ಮಂಜುನಾಥ್ ಕರೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಸರ್ಕಾರಿ ಕಾನೂನು ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಯೋಜನೆಗಳ ಕುರಿತು ಕಾನೂನು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಉತ್ತಮ ವಕೀಲರೆನಿಸಿಕೊಳ್ಳಲು ಪುಸ್ತಕಗಳ ಅಧ್ಯಯನ ಅಗತ್ಯವಿದೆ, ಹೊಸ ಹೊಸ ಕಾನೂನುಗಳ ಜಾರಿ ಸಂದರ್ಭದಲ್ಲಿ ಅವುಗಳ ಕುರಿತು ತಿಳಿದುಕೊಳ್ಳಬೇಕು, ವಕೀಲ ವೃತ್ತಿಯಲ್ಲಿ ಹಣ ಗಳಿಕೆಗೆ ಮಾತ್ರ ಸೀಮಿತವಾಗದೇ ಸಮಾಜಕ್ಕೂ ನೆರವಾಗುವ ಗುಣ ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಕಾನೂನು ಪದವಿ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ ಅವರು, ನೀವು ಸಮಾಜಕ್ಕೆ ಒಳಿತನ್ನು ಮಾಡುವ ಜವಾಬ್ದಾರಿ ಇದೆ, ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆ ಇದ್ದು, ಅದು ಸಮಾಜಕ್ಕೆ ಬಳಕೆಯಾಗಬೇಕು, ನೀವು ಸಮಾಜಕ್ಕೆ ಮಾದರಿಯಾಗಿರಬೇಕು ಎಂದರು.
Kshetra Samachara
19/01/2025 03:32 pm