ಉಡುಪಿ: ಉಡುಪಿಯ ಕಡಗೋಲು ಕೃಷ್ಣ ದೇವರನ್ನು ಆಚಾರ್ಯ ಮದ್ವರು ಪ್ರತಿಷ್ಟಾಪಿಸಿದ ದಿನ ಮಕರಸಂಕ್ರಾಂತಿ. ಈ ಪ್ರಯುಕ್ತ ನಡೆಯುವ ಸಪ್ತೋತ್ಸವ ಇಂದು ಹಗಲು ತೇರಿನ ಮೂಲಕ ಸಂಪನ್ನಗೊಂಡಿತು.ಕಡಲಿನಲ್ಲಿ ತೇಲಿಬಂದ ಕಡಗೋಲು ಕೃಷ್ಣನ ಮೂರ್ತಿಯನ್ನು ಮಧ್ವಾಚಾರ್ಯರು ಪ್ರತಿಷ್ಟಾಪಿಸಿ ಎಂಟು ಶತಮಾನ ಕಳೆಯಿತು. ಅಂದಿನಿಂದಲೂ ನಡೆದು ಬಂದಿರುವ ಪೂಜಾಪರಂಪರೆಗೆ ಇಂದು ನಡೆದ ಹಗಲು ಉತ್ಸವ ಸಾಕ್ಷಿಯಾಯ್ತು.
ಚಿನ್ನದ ಪಲ್ಲಕಿಯಲ್ಲಿ ಕೃಷ್ಣ ದೇವರ ಉತ್ಸವ ಮೂರ್ತಿಯನ್ನು ತಂದು ಬ್ರಹ್ಮರಥದಲ್ಲಿ ಇರಿಸಲಾಯ್ತು. ಬಳಿಕ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಕೃಷ್ಣ ದೇವರ ಉತ್ಸವಮೂರ್ತಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಕೆಲವು ವಿಶಿಷ್ಟ ಸಂಪ್ರದಾಯಗಳು ನಡೆಯುತ್ತವೆ. ಸದಾ ಪೂಜೆ, ಪ್ರವಚನದಲ್ಲೇ ನಿರತರಾಗಿರುವ ಮಠಾಧೀಶರು ಭಕ್ತರೊಂದಿಗೆ ಬೆರೆಯಲು ಈ ಉತ್ಸವದ ಸಂದರ್ಭವನ್ನು ಬಳಸಿಕೊಳ್ಳುತ್ತಾರೆ. ಪೂಜೆಯ ಬಳಿಕ ರಥದಿಂದ ಪ್ರಸಾದ ಹಾಗೂ ಧನಕನಕಗಳನ್ನು ಭಕ್ತರತ್ತ ಎಸೆಯೋದು ಒಂದು ಪದ್ಧತಿ.ಈ ವೇಳೆ ಭಕ್ತರು ಮುಗಿಬಿದ್ದು ಸಂಗ್ರಹಿಸುವ ದೃಶ್ಯ ಗಮನಸೆಳೆಯುತ್ತದೆ.ಉಡುಪಿಯಲ್ಲಿ ಸಪ್ತೋತ್ಸವದ ಸಂದರ್ಭದಲ್ಲಿ ಮಾತ್ರ ಹಗಲಿಗೆ ಬ್ರಹ್ಮರಥವನ್ನು ಎಳೆಯಲಾಗುತ್ತದೆ. ಈ ಉತ್ಸವವನ್ನು ಚೂರ್ಣೋತ್ಸವ ಎಂದೂ ಕರೆಯುತ್ತಾರೆ. ಮಠಾಧೀಶರು ಭಕ್ತರ ಜೊತೆಗೂಡಿ ರಥ ಎಳೆಯೋದು ಅಪರೂಪದ ದೃಶ್ಯ. ರಥಬೀದಿಗೆ ಪ್ರದಕ್ಷಿಣೆ ಬಂದ ನಂತರ ವಸಂತ ಮಂಟಪದಲ್ಲಿ ದೇವರ ಪೂಜೆ ನಡೆಯುತ್ತದೆ. ಬಳಿಕ ಮಧ್ವ ಸರೋವರದಲ್ಲಿ ಅವಭೃತ ಸ್ನಾನ ಜರುಗುತ್ತದೆ. ಉತ್ಸವದಲ್ಲಿ ಮೆರೆದಾಡಿದ ಬಾಲಕೃಷ್ಣನನ್ನು ಸರೋವರದ ನೀರಿನಲ್ಲಿ ತೋಯಿಸಲಾಗುತ್ತದೆ, ಯತಿಗಳ ತಲೆಗೆ ಕೃಷ್ಣಮೂರ್ತಿಯ ಅಭಿಷೇಕ ನಡೆಯುತ್ತದೆ. ಬಳಿಕ ನೆರೆದ ಭಕ್ತರಿಗೆಲ್ಲಾ ಮಧ್ವ ಸರೋವರದ ನೀರನ್ನು ಚಿಮುಕಿಸಿ ತೀರ್ಥ ರೂಪದಲ್ಲಿ ನೀಡಲಾಗುತ್ತದೆ.
Kshetra Samachara
15/01/2025 01:00 pm