ಮಂಗಳೂರು: ನಗರದ ಹೊರವಲಯದ ತಣ್ಣೀರುಬಾವಿ ಗಣೇಶ ಕಟ್ಟೆ ಎಂಬಲ್ಲಿ ಭಾನುವಾರ ರಾತ್ರಿ ಸಿಗಾರ್‌ಲೈಟರ್ ವಿಚಾರದಲ್ಲಿ ಇತ್ತಂಡಗಳ ನಡುವೆ ಹೊಡೆದಾಟ ನಡೆದ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಲ್ವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕಾರ್ತಿಕ್, ಸಂತೋಷ್, ಧನುಷ್, ಪ್ರಜ್ವಲ್ ಎಂದು ಗುರುತಿಸಲಾಗಿದೆ. ಭಾನುವಾರ ರಾತ್ರಿ 11:45ರ ವೇಳೆ ತಣ್ಣೀರುಬಾವಿ ಗಣೇಶ ಕಟ್ಟೆ ಎಂಬಲ್ಲಿ ವೆಂಕಟೇಶ್, ಕಾರ್ತಿಕ್, ಸಂತೋಷ್, ಸೈಫ್, ಧನುಷ್, ಪ್ರಜ್ವಲ್ ಎಂಬವರು ಪಾನಮತ್ತರಾಗಿ ಸಿಗರೇಟ್ ಸೇದುತ್ತಿದ್ದಾಗ ಅಲ್ಲಿಗೆ ಆಗಮಿಸಿದ ಪ್ರೀತಂ ಮತ್ತು ಸನ್ವಿತ್ ಸಿಗಾರ್ ಲೈಟರ್ ಕೇಳಿದ್ದು, ಈ ವೇಳೆ ಪ್ರಜ್ವಲ್ ಲೈಟರ್ ನೀಡಿದ್ದಾರೆ ಎನ್ನಲಾಗಿದೆ.
ಪ್ರಜ್ವಲ್ ಸಿಗಾರ್ ಲೈಟರ್‌ನ್ನು ವಾಪಸ್ ಕೇಳಿದಾಗ “ನೀವು ಯಾಕೆ ಧಮ್ಮಿ ಹಾಕುತ್ತಿರಿ' ಎಂದು ಹೇಳಿ ಅವರಲೊಬ್ಬ ಪ್ರಜ್ವಲ್ ಜೊತೆಗಿದ್ದ ಕಾರ್ತಿಕ್ ತಲೆಗೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ್ದಾನೆ. ಆಗ ಇತ್ತಂಡಗಳ ನಡುವೆ ಹೊಡೆದಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಪಣಂಬೂರು ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ. ಘಟನೆಯ ಬಗ್ಗೆ ಪ್ರೀತಂ ಎಂಬವರು ನೀಡಿದ ದೂರಿನಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ವೆಂಕಟೇಶ್, ಕಾರ್ತಿಕ್, ಸಂತೋಷ್, ಸೈಫ್, ಧನುಷ್, ಪ್ರಜ್ವಲ್ ಎಂಬವರು ಆರೋಪಿಗಳಾಗಿದ್ದು, ಇವರಲ್ಲಿ ಕಾರ್ತಿಕ್, ಸಂತೋಷ್, ಧನುಷ್, ಪ್ರಜ್ವಲ್ ಎಂಬವರನ್ನು ಬಂಧಿಸಲಾಗಿದೆ.
ಪ್ರಜ್ವಲ್ ಎಂಬಾತ ನೀಡಿದ ದೂರಿನಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಇನ್ನೊಂದು ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿ ಪ್ರೀತಂ ಮತ್ತು ಸನ್ವಿತ್ ಹಾಗೂ ಇತರರು ಆರೋಪಿಗಳಾಗಿರುತ್ತಾರೆ. ಘಟನೆಯ ಬೆನ್ನೆಲ್ಲೇ ವಾಟ್ಸಾಪ್ ನಲ್ಲಿ ಬೆಂಗ್ರೆ ಪರಿಸರದಲ್ಲಿ ಸುಳ್ಳು ಸುದ್ದಿ ಹರಿದಾಡಲಾರಂಭಿಸಿದೆ ಎಂದು ನಗರ ಪೊಲೀಸ್ ಆಯುಕ್ತರು ಈ ಸಂಬಂಧ ಸ್ಪಷ್ಟನೆ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಡಿಸಿಪಿ (ಕಾನೂನು ಹಾಗೂ ಸುವ್ಯವಸ್ಥೆ) ಸಿದ್ದಾರ್ಥ್ ಗೋಯಲ್, ಮಂಗಳೂರು ನಗರ ಹಾಗೂ ಎಸಿಪಿ, ಸಿಸಿಬಿ, ಎಸಿಪಿ ಉತ್ತರ ಉಪ ವಿಭಾಗ, ಪಣಂಬೂರು ಪೊಲೀಸ್ ನಿರೀಕ್ಷಕರು ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿ ವಾಟ್ಸಾಪ್ ನಲ್ಲಿ ಹರಿದಾಡುತ್ತಿರುವುದು ಸುಳ್ಳು ಸುದ್ದಿಯಾಗಿರುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Kshetra Samachara
14/01/2025 09:15 am