ಬೆಂಗಳೂರು: ಸರ್ಕಾರ ಕೊಟ್ಟ ಹಣವನ್ನು ಖರ್ಚು ಮಾಡದೆ ಸ್ಕಾಲರ್ಶಿಪ್ ವಿತರಣೆಯಲ್ಲಿ ನಿರ್ಲಕ್ಷ್ಯ ತೋರಿ, ವರ್ಷದ ಕೊನೆ ತಿಂಗಳಲ್ಲಿ ಖರ್ಚು ಮಾಡುವ ಅಧಿಕಾರಿಗಳ ಅಭ್ಯಾಸದ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ ಆಗಿ ತರಾಟೆ ತೆಗೆದುಕೊಂಡಿದ್ದಾರೆ.
ಗೃಹ ಕಚೇರಿ ಕೃಷ್ಣದಲ್ಲಿ ಎರಡೂವರೆ ಗಂಟೆ ಕಾಲ ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲಿಸಿದ ಸಿಎಂ ಸಿದ್ದರಾಮಯ್ಯ ಅವರು, ಇಲಾಖೆಯ
ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು, ವರ್ಷದ ಕೊನೆ ತಿಂಗಳಲ್ಲೇ ಖರ್ಚು ಮಾಡುವ ಅಸಹ್ಯ ಅಭ್ಯಾಸ ಬೆಳೆಸಿಕೊಂಡಿದ್ದೀರಿ. ಬಡವರಿಗೆ, ಅರ್ಹ ಫಲಾನುಭವಿಗಳಿಗೆ ಹಂಚಲು ಕೊಟ್ಟ ಹಣವನ್ನು ಖರ್ಚು ಮಾಡದೆ ಇಟ್ಟುಕೊಂಡು ಕೂರುವುದಕ್ಕಾ ನೀವು ಇರುವುದು ಎಂದು ಪ್ರಶ್ನಿಸಿದರು.
ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಿ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚಿಸಿದರು. 2024-25 ನೇ ಸಾಲಿನಲ್ಲಿ ಆಯವ್ಯಯದಲ್ಲಿ ಸಮಾಜ ಕಲ್ಯಾಣ ಇಲಾಖೆಗೆ 5,377 ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ. ಇದುವರೆಗೆ ಅನುದಾನ 3,631 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ಈ ಹಣ ಕೂಡ ಪೂರ್ತಿ ಖರ್ಚು ಮಾಡದ ಬಗ್ಗೆ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಅಂಬೇಡ್ಕರ್ ನಿಗಮದಲ್ಲಿ 900 ಕೋಟಿ ರೂಪಾಯಿ, ಭೋವಿ ನಿಗಮದಲ್ಲಿ 107 ಕೋಟಿ ರೂಪಾಯಿ ಸೇರಿ ಎಲ್ಲಾ ನಿಗಮಗಳಲ್ಲಿ ನೂರಾರು ಕೋಟಿ ಹಣ ಇದ್ದರೂ ಖರ್ಚು ಮಾಡದ ನಿಗಮದ ಎಂಡಿ ಗಳಿಗೆ ನೋಟಿಸ್ ನೀಡಿ, ಅಗತ್ಯ ಬಿದ್ದರೆ ಸಸ್ಪೆಂಡ್ ಮಾಡುವಂತೆ ಖಡಕ್ ಸೂಚನೆ ನೀಡಿದರು.
PublicNext
07/01/2025 07:23 pm