ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಳಲ್ಕೆರೆ : ಕೇಂದ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವೆ- ಶಾಸಕ ಡಾ.ಎಂ.ಚಂದ್ರಪ್ಪ

ಹೊಳಲ್ಕೆರೆ : ಕ್ಷೇತ್ರದ ಜನರಿಗೆ ಏನು ಅನುಕೂಲವಾದರೆ ಒಳ್ಳೆಯದಾಗುತ್ತದೆನ್ನುವ ಪ್ರಜ್ಞೆಯಿಟ್ಟುಕೊಂಡು ಹಗಲು-ರಾತ್ರಿ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.

ತಾಲ್ಲೂಕಿನ ಮಲಸಿಂಗನಹಳ್ಳಿ ಗ್ರಾಮದಲ್ಲಿ ಹಳೇಹಳ್ಳಿ ಗೇಟ್‍ನಿಂದ ಪಾಪೇನಹಳ್ಳಿವರೆಗೂ 16.56 ಕೋಟಿ ರೂ.ವೆಚ್ಚದಲ್ಲಿ ನೂತನ ಸಿ.ಸಿ.ರಸ್ತೆ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು, ಚಿಕ್ಕಜಾಜೂರಿನ ಕೋಟೆಹಾಳ್ ಸಮೀಪ ಐದುನೂರು ಕೋಟಿ ರೂ.ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ನಿರ್ಮಾಣವಾಗುತ್ತಿದ್ದು, ಜೋಗ್‍ಫಾಲ್ಸ್‍ನಿಂದ ನೇರವಾಗಿ ವಿದ್ಯುತ್ ಸರಬರಾಜಾಗಲಿದೆ.

ಇದರಿಂದ ಇನ್ನು ನೂರು ವರ್ಷಗಳ ಕಾಲ ರೈತರಿಗೆ ವಿದ್ಯುತ್ ಅಭಾವ ಕಾಡುವುದಿಲ್ಲ. ತಾಲ್ಲೂಕಿನಾದ್ಯಂತ ಪ್ರತಿ ಮನೆ ಮನೆಗೆ ಶುದ್ದ ಕುಡಿಯುವ ನೀರು ಪೂರೈಸುವುದಕ್ಕಾಗಿ 367 ಕೋಟಿ ರೂ.ಗಳನ್ನು ಖರ್ಚು ಮಾಡಿ ಹಿರಿಯೂರಿನ ವಾಣಿವಿಲಾಸಸಾಗರದಿಂದ ನೀರು ಒದಗಿಸಲಾಗುವುದು. ತಾಲ್ಲೂಕಿನಾದ್ಯಂತ ಗುಣ ಮಟ್ಟದ ಶಾಲಾ-ಕಾಲೇಜು, ಕೆರೆ ಕಟ್ಟೆ, ಚೆಕ್‍ಡ್ಯಾಂಗಳ ನಿರ್ಮಾಣವಾಗಿದೆ. ಹೈಟೆಕ್ ಆಸ್ಪತ್ರೆಗಳನ್ನು ಕಟ್ಟಿಸಿದ್ದೇನೆಂದರು.

ಮೂವತ್ತು ವರ್ಷಗಳ ಹಿಂದೆ ಭರಮಸಾಗರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಾಗ ಓಡಾಡಲು ರಸ್ತೆಯಿರಲಿಲ್ಲ. ಗೆದ್ದ ನಂತರ 386 ಹಳ್ಳಿಗಳಲ್ಲಿ ರಸ್ತೆ ಮಾಡಿಸಿದ್ದರಿಂದ ಅಲ್ಲಿನ ಮತದಾರರು ರಸ್ತೆ ರಾಜ ಎಂಬ ಬಿರುದು ನೀಡಿ ಎರಡನೆ ಬಾರಿಗೆ ಗೆಲ್ಲಿಸಿದರು. ದೇವಾಲಯಗಳನ್ನು ಅಭಿವೃದ್ದಿಪಡಿಸಿದ್ದೇನೆ ಹೇಳಿದರು.

ಸರ್ಕಾರಿ ಶಾಲೆಗೆ ಬರುವ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದೆನ್ನುವ ಕಾರಣಕ್ಕಾಗಿ ಸ್ವಂತ ಖರ್ಚಿನಿಂದ ಬಸ್‍ಗಳ ವ್ಯವಸ್ಥೆ ಕಲ್ಪಿಸಿ ಚಾಲಕ, ಕಂಡಕ್ಟರ್‍ಗೆ ಸಂಬಳ, ಬಸ್‍ಗೆ ಡೀಸೆಲ್ ಪೂರೈಸುತ್ತಿದ್ದೇನೆ. ರಾಜ್ಯದಲ್ಲಿ ಯಾವ ಶಾಸಕನು ಇಂತಹ ಕೆಲಸ ಮಾಡಿಲ್ಲ. ಚಿಕ್ಕ ಮಕ್ಕಳಿಗಾಗಿ ಅಂಗನವಾಡಿಗಳನ್ನು ಕಟ್ಟಲಾಗಿದೆ. ಒಟ್ಟಾರೆ ಕ್ಷೇತ್ರದಲ್ಲಿ ಯಾರಿಂದಲೂ ಏನನ್ನು ಹೇಳಿಸಿಕೊಳ್ಳದೆ ಎಲ್ಲೆಲ್ಲಿ ಏನು ಕೆಲಸವಾಗಬೇಕೆನ್ನುವುದನ್ನು ಹುಡುಕಿ ಅಭಿವೃದ್ದಿಯಲ್ಲಿ ತೊಡಗಿ ಮತದಾರರ ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ-13 ರಿಂದ ಪಾಪೇನಹಳ್ಳಿವರೆಗೆ ರಸ್ತೆ ಅಭಿವೃದ್ದಿಯಾಗಿದೆ. ಇದರಿಂದ ಟಿ.ಎಮ್ಮಿಗನೂರು, ಸಿರಾಪನಹಳ್ಳಿ, ಮಲಸಿಂಗನಹಳ್ಳಿ, ದುಗ್ಗಾವರ, ಹುಲಿಕೆರೆ, ದುಗ್ಗಾವರಹಟ್ಟಿ, ಚಿತ್ರದುರ್ಗ, ಹೊಳಲ್ಕೆರೆ ತಾಲ್ಲೂಕು ಗಡಿ ಹಾಗೂ ಹೊಸದುರ್ಗಕ್ಕೆ ನೇರ ಸಂಪರ್ಕ ಕಲ್ಪಿಸಿದಂತಾಗಿದೆ ಎಂದರು.

ಚುನಾವಣೆಯಲ್ಲಿ ಮತ ಹಾಕುವುದು ಸೆಕೆಂಡಿನ ಕೆಲಸ. ಆ ವೋಟು ನನಗೆ ಗೌರವ ತಂದುಕೊಟ್ಟಿದೆ. ಅದಕ್ಕೆ ಬೆಲೆ ಕೊಡಬೇಕೆಂದು ಅಭಿವೃದ್ದಿಗೆ ಶ್ರಮಿಸುತ್ತಿದ್ದೇನೆ. ಎಲ್ಲಾ ಕೆರೆಗಳ ಕಾಯಕಲ್ಪವಾಗಿದೆ. ಮಳೆ ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ತಡೆಗಟ್ಟುವುದಕ್ಕಾಗಿ ಚೆಕ್‍ಡ್ಯಾಂಗಳನ್ನು ಕಟ್ಟಿಸಿದ್ದೇನೆ. ಭದ್ರಾ ಪ್ರಾಜೆಕ್ಟ್‍ನಿಂದ ಕೆರೆಗಳಿಗೆ ನೀರು ತುಂಬಿಸುವ ಕೆಲಸವಾಗುತ್ತಿದೆ. ಕೆರೆಗಳ ಅಭಿವೃದ್ದಿ, ಚೆಕ್‍ಡ್ಯಾಂಗಳ ನಿರ್ಮಾಣಕ್ಕಾಗಿಯೇ ಮುನ್ನೂರರಿಂದ ನಾಲ್ಕು ನೂರು ಕೋಟಿ ರೂ.ಗಳನ್ನು ಖರ್ಚು ಮಾಡಿದ್ದೇನೆಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಯುವರಾಜ್, ರಮೇಶ್, ಗೌಡ್ರು ನಾಗೇಂದ್ರಣ್ಣ, ತಿಮ್ಮಪ್ಪ ಗುಡಿಗೌಡ್ರು, ಡಿ.ಸಿ.ಮೋಹನ್, ಅಚ್ಚುತಪ್ಪ, ಹೊರಕೇರಪ್ಪ, ದುಗ್ಗೇಶ್, ಗುರುಮೂರ್ತಿ, ತಿಪ್ಪೇಸ್ವಾಮಿ, ರೆಡ್ಡಿನಾಗಣ್ಣ, ಶಿಕ್ಷಕ ಅಂಬರೀಶ್ ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿ ಹಾಜರಿದ್ದರು.

Edited By : PublicNext Desk
Kshetra Samachara

Kshetra Samachara

07/01/2025 05:06 pm

Cinque Terre

1.92 K

Cinque Terre

0

ಸಂಬಂಧಿತ ಸುದ್ದಿ