ಬೀದರ್: ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕ ಪ್ರಭು.ಬಿ ಚವ್ಹಾಣ ಅವರು ಜನವರಿ 6ರಂದು ಕಮಲನಗರ ತಾಲ್ಲೂಕಿನ ವಿವಿಧೆಡೆ ಗ್ರಾಮ ಸಂಚಾರ ನಡೆಸಿ, ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರಲ್ಲದೇ ಶಾಲೆ, ಅಂಗನವಾಡಿ ಕೇಂದ್ರ ಹಾಗೂ ಮತ್ತಿತರೆ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದರು.
ಚುಂಬಲೆವಾಡಿ, ರಂಡ್ಯಾಳ, ಖತಗಾಂವ, ಮದನೂರ, ಕಮಲನಗರ, ಮುರುಗ್(ಕೆ), ಬಾಳೂರ ಹಾಗೂ ಚಾಂಡೇಶ್ವರ ಶಾಲೆಗಳಲ್ಲಿ 14 ಲಕ್ಷ ರೂಪಾಯಿ ಮೊತ್ತದ ಶಾಲೆ ಉನ್ನತೀಕರಣ, ದುರಸ್ತಿ, ಕುಡಿಯುವ ನೀರು, ಓಹೆಚ್‌ಟಿ ಟ್ಯಾಂಕ್, ಸೋಲಾರ್ ಪೆನಲ್ ಅಳವಡಿಕೆ ಕಾಮಗಾರಿಗಳು, ಹಕ್ಯಾಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ನೂತನ ತರಗತಿ ಕೋಣೆಗಳು, ಕಮಲನಗರದಲ್ಲಿ 25 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಶೌಚಾಲಯ, 22.50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಅಂಗನವಾಡಿ ಕೇಂದ್ರ, ಮುರುಗ್(ಕೆ)ನಲ್ಲಿ 4.99 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಸಮುದಾಯ ಭವನ ಸೇರಿದಂತೆ ಸುಮಾರು 2.56 ಕೋಟಿಗೂ ಹೆಚ್ಚು ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಶಾಲೆಗಳಿಗೆ ತೆರಳಿ, ಶಿಕ್ಷಕರು ಮತ್ತು ಮಕ್ಕಳ ಹಾಜರಾತಿಯನ್ನು ವೀಕ್ಷಿಸಿದರು. ಮಕ್ಕಳಿಗೆ ಓದಲು ತಿಳಿಸಿ, ಶಾಲೆಯಲ್ಲಿ ಪಠ್ಯ ಚಟುವಟಿಕೆಗಳು ಹೇಗೆ ನಡೆಯುತ್ತಿವೆ ಎನ್ನುವುದನ್ನು ತಿಳಿದುಕೊಂಡರು. ಕೆಲವು ಮಕ್ಕಳು ಓದಲು ಸಂಕಷ್ಟಪಡುವುದನ್ನು ಕಂಡು ಶಿಕ್ಷಕರ ವಿರುದ್ಧ ಅಸಮಧಾನಗೊಂಡರು. ಪ್ರೌಢ ಶಾಲೆಯ ವಿದ್ಯಾರ್ಥಿಗಳಲ್ಲಿ ಕನಿಷ್ಠ ಓದುವ ಜ್ಞಾನ ಇಲ್ಲದಿದ್ದರೆ ತಾವು ಏನು ಕೆಲಸ ಮಾಡುತ್ತಿದ್ದೀರೆಂದು ತರಾಟೆಗೆ ತೆಗೆದುಕೊಂಡರು.
ದಲ್ಲಾಳಿಗಳಿಗೆ ಕಡಿವಾಣ ಹಾಕಿ: ನಾಡ ಕಛೇರಿ ಸೇರಿದಂತೆ ವಿವಿಧ ಸರ್ಕಾರಿ ಕಛೇರಿಗಳಲ್ಲಿ ಹಣ ಕೊಡದೇ ಕೆಲಸವಾಗುತ್ತಿಲ್ಲವೆಂಬ ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ಗ್ರಾಮ ಸಂಚಾರದ ವೇಳೆ ಬಹಳಷ್ಟು ಗ್ರಾಮಗಳಲ್ಲಿ ಈ ಬಗ್ಗೆ ದೂರುಗಳನ್ನು ನೀಡಿದ್ದಾರೆ. ಪಹಣಿ ತಿದ್ದುಪಡಿ ಹಾಗೂ ಮತ್ತಿತರೆ ಜಮೀನು ಸಂಬಂಧಿತ ಕೆಲಸಗಳಿಗೆ 50 ಸಾವಿರದಿಂದ ಒಂದು ಲಕ್ಷದ ವರೆಗೆ ಹಣ ಕೇಳುತ್ತಿದ್ದಾರೆಂಬ ದೂರುಗಳಿವೆ. ಔರಾದ(ಬಿ) ತಾಲ್ಲೂಕಿನ ನಾಗನಪಲ್ಲಿ, ಚಿಂತಾಕಿ ಸೇರಿದಂತೆ ಅನೇಕ ಕಡೆಗಳಲ್ಲಿ ಸಾರ್ವಜನಿಕರು ಬೇಸರ ಹೊರಹಾಕಿದ್ದಾರೆ. ತಹಸೀಲ್ದಾರರು ಇಂತಂಹ ಅವ್ಯವಹಾರಳಿಗೆ ಕಡಿವಾಣ ಹಾಕಬೇಕೆಂದು ನಿರ್ದೇಶನ ನೀಡಿದರು.
ಜಾತಿ, ಆದಾಯ ಪ್ರಮಾಣ ಪತ್ರ ಹೀಗೆ ಸಣ್ಣ-ಪುಟ್ಟ ಕೆಲಸಗಳಿಗೂ ಹಣ ವಸೂಲಿ ಮಾಡಲಾಗುತ್ತಿದೆ. ದುಡ್ಡು ಕೊಟ್ಟರೆ ಮಾತ್ರ ಕೆಲಸವಾಗುತ್ತಿದ್ದು, ಇಲ್ಲವಾದಲ್ಲಿ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ. ಬಡ ಜನತೆ ಏನು ಮಾಡುವುದೆಂದು ಜನ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಇಂತವರನ್ನು ಗುರುತಿಸಿ ಮುಲಾಜಿಲ್ಲದೇ ಅಮಾನತುಗೊಳಿಸಬೇಕು ಎಂದು ಸೂಚಿಸಿದರು.
Kshetra Samachara
06/01/2025 08:29 pm