ಮುಲ್ಕಿ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಕ್ರಮ ಪ್ರವೇಶ, ಸೊತ್ತು ನಾಶ ಮತ್ತು ಜೀವ ಬೆದರಿಕೆ ಪ್ರಕರಣವೊಂದರಲ್ಲಿ ಭಾಗಿಯಾಗಿ 24 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿರುವ ಆರೋಪಿಯನ್ನು ಮುಲ್ಕಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿಯನ್ನು ಮುಲ್ಕಿ ಸಮೀಪದ ಕಿಲ್ಪಾಡಿ ನಿವಾಸಿ ಕಿಶೋರ್ ಕುಮಾರ್ (34) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಿಲ್ಪಾಡಿ ಗ್ರಾಮದ ಕಲ್ಲಗುಡ್ಡೆ ಎಂಬಲ್ಲಿನ ನಿವಾಸಿ ಸುಧಾಕರ ಭಂಡಾರಿ ಎಂಬವರು ತನ್ನ ಜಾಗದ ಮರಗಳನ್ನು ಕಿಲ್ಪಾಡಿ ಗ್ರಾಮದ ನಿವಾಸಿಗಳಾದ ಆಶೋಕ ಮತ್ತು ಕಿಶೋರ್ ಕುಮಾರ್ ರವರು ಅಕ್ರಮ ಪ್ರವೇಶ ಮಾಡಿ ಕಡಿದು ನಾಶ ಮಾಡಿ ಜೀವ ಬೆದರಿಕೆ ಹಾಕಿದ ಬಗ್ಗೆ ಮುಲ್ಕಿ ಠಾಣೆಯಲ್ಲಿ ನೀಡಿದ ದೂರಿನಂತೆ ಅ.ಕ್ರ:33/2000 ಕಲಂ:447, 427, 379, 506 ಜೊತೆಗೆ 34 ಐ.ಪಿ.ಸಿ. ಯಂತೆ ಪ್ರಕರಣ ದಾಖಲಾಗಿ ಪ್ರಕರಣವು ಮೂಡಬಿದ್ರೆ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿತ್ತು.
ಪ್ರಕರಣದ ಆರೋಪಿಯಾದ ಕಿಶೋರ್ ಕುಮಾರ್ ಎಂಬಾತನು 24 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ಇದ್ದು ಈ ಬಗ್ಗೆ ನ್ಯಾಯಾಲಯವು ಆರೋಪಿಯ ವಿರುದ್ದ ಎಲ್.ಪಿ.ಸಿ. ವಾರೆಂಟ್ ಹೊರಡಿಸಿತ್ತು.
ಜನವರಿ 3 ರಂದು ಪ್ರಕರಣದ ಆರೋಪಿ ಕಿಶೋರ್ ಕುಮಾರ್ ಎಂಬಾತನ ಬಗ್ಗೆ ಮಾಹಿತಿ ಸಂಗ್ರಹಿಸಿ ಆರೋಪಿಯನ್ನು ಬಂಧಿಸುವಲ್ಲಿ ಮುಲ್ಕಿ ಪೊಲೀಸರು ಯಶಸ್ವಿಯಾಗಿದ್ದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
Kshetra Samachara
04/01/2025 03:33 pm