ಬೆಳಗಾವಿ: ಬೆಳಗಾವಿಯಲ್ಲಿ ಛತ್ರಪತಿ ಮಹಾರಾಜರ ಪುತ್ಥಳಿ ಅನಾವರಣ ಮಾಡುವ ವಿಚಾರವಾಗಿ ಶಾಸಕ ಅಭಯ್ ಪಾಟೀಲ್ ಹಾಗೂ ರಮಾಕಾಂತ್ ಕೊಂಡುಸ್ಕರ್ ಬೆಂಬಲಿಗರ ನಡುವೆ ಜಟಾಪಟಿ ಶುರುವಾಗಿದೆ.
ಬೆಳಗಾವಿಯ ಅನಗೋಳದಲ್ಲಿರುವ ಡಿವಿಎಸ್ ಚೌಕ್ ನಲ್ಲಿ 21 ಅಡಿ ಎತ್ತರದ ವೀರಸಂಭಾಜಿ ಮಹಾರಾಜರ ಮೂರ್ತಿ ಸ್ಥಾಪಿಸಲಾಗಿದ್ದು, ಕಾಮಗಾರಿ ಇದುವರೆಗೆ ಮುಗಿದಿಲ್ಲ. ಆದರೆ ಕಾಮಗಾರಿ ಮುಗಿಯದೆ ಈ ಮೂರ್ತಿ ಹೇಗೆ ಅನಾವರಣ ಮಾಡುತ್ತಾರೆ ಎಂದು ಅನಗೋಳ ಗ್ರಾಮಸ್ಥರು ಹಾಗೂ ರಮಾಕಾಂತ ಕೊಂಡುಸ್ಕರ್ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಡುವೆ ಮೇಯರ್ ದಲಿತ ಎಂಬ ಕಾರಣಕ್ಕೆ ಮೂರ್ತಿ ಅನಾವರಣಕ್ಕೆ ವಿರೋಧ ವ್ಯಕ್ತ ಮಾಡಲಾಗುತ್ತಿದೆ ಎಂದು ಮೇಯರ್ ಸವಿತಾ ಕಾಂಬಳೆ ಹಾಗೂ ಉಪ ಮೇಯರ್ ಆನಂದ ಚವ್ಹಾನ ಅವರು ಹೇಳಿಕೆ ನೀಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
ಪುತ್ಥಳಿ ಅನಾವರಣ ವಿಚಾರದಲ್ಲಿ ಶ್ರೀರಾಮಸೇನಾ ಹಿಂದೂಸ್ಥಾನ್ ಸಂಸ್ಥಾಪಕ ರಮಾಕಾಂತ್ ಕೊಂಡುಸ್ಕರ್ ಮತ್ತು ಸ್ಥಳೀಯ ಶಾಸಕ ಅಭಯ್ ಪಾಟೀಲ್ ನಡುವೆ ಜಟಾಪಟಿ ಆರಂಭವಾಗಿದ್ದು, ಮೂರ್ತಿ ಅನಾವರಣ ಸಂಬಂಧ ನಿನ್ನೆ ಮಹಾನಗರ ಪಾಲಿಕೆ ಮೇಯರ್ ನಿಂದ ಸಭೆ ನಡೆದಿದೆ. ಸಭೆಯಲ್ಲಿ ಜ.5 ರಂದು ಪುತ್ಥಳಿ ಅನಾವರಣ ಮಾಡಲು ನಿರ್ಧರಿಸಲಾಗಿದೆ. ಆದರೆ ಯಾವುದೇ ತಯಾರಿ ಇಲ್ಲದೆ ಇಂದು ಮೂರ್ತಿ ಉದ್ಘಾಟನೆ ಮಾಡುವ ಮೂಲಕ ಮಹಾರಾಜರಿಗೆ ಅಪಾಮಾನ ಮಾಡುವುದು ಬೇಡ. ಹೀಗಾಗಿ ಕಾಮಗಾರಿ ಪೂರ್ಣಗೊಳಿಸಿ ಪುತ್ಥಳಿ ಅನಾವರಣ ಮಾಡುವಂತೆ ಆನಗೋಳದ ಜನ ಒತ್ತಾಯಿಸಿದ್ದಾರೆ.
ಮೂರ್ತಿ ಬಳಿ ಎರಡೂ ಕಡೆ ಬೆಂಬಲಿಗರ ಜಮಾವಣೆಯಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮೂವರು ಸಿಪಿಐಗಳ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
PublicNext
02/01/2025 01:47 pm