ಮಂಗಳೂರು : ಅಪಘಾತದಲ್ಲಿ ರಸ್ತೆಗೆಸೆಯಲ್ಪಟ್ಟ ಸ್ಕೂಟರ್ ಸವಾರನ ಮೇಲೆಯೇ ಲಾರಿ ಹರಿದು ಆನ್‌ಲೈನ್ ಫುಡ್‌ಡೆಲಿವರಿ ಬಾಯ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮಂಗಳವಾರ ಮಧ್ಯರಾತ್ರಿ ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ- ಸಂಕೋಳಿಗೆಯಲ್ಲಿ ನಡೆದಿದೆ.
ಕೋಟೆಕಾರು ಬಳಿಯ ಪನೀರ್ ನಿವಾಸಿ ಉಮ್ಮರ್ ಫಾರೂಕ್(33) ಮೃತಪಟ್ಟ ಯುವಕ.
ಉಮ್ಮರ್ ಫಾರೂಕ್ ಆನ್‌ಲೈನ್ ಫುಡ್ ಡೆಲಿವರಿ ಕಂಪೆನಿಯೊಂದರಲ್ಲಿ ಡೆಲಿವರಿ ಬಾಯ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಂಗಳವಾರ ರಾತ್ರಿ ತಲಪಾಡಿಯಿಂದ ಬರುತ್ತಿದ್ದ ವೇಳೆ ಸಂಕೋಲಿಗೆ ಬಳಿ ಲಾರಿಯೊಂದು ಇವರ ಸ್ಕೂಟರ್‌ಗೆ ಢಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಫಾರೂಕ್ ಅವರು ರಸ್ತೆಗೆಸೆಯಲ್ಪಟ್ಟಿದ್ದಾರೆ. ಈ ವೇಳೆ ಲಾರಿಯ ಹಿಂಭಾಗದ ಚಕ್ರ ಫಾರೂಕ್ ಮೇಲೆಯೇ ಹರಿದ ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಫಾರೂಕ್ ಮೃತದೇಹವನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ನಡೆಸಲಾಗಿದೆ. ಫಾರೂಕ್ ಅವಿವಾಹಿತರಾಗಿದ್ದು, ಎಸ್‌ಡಿಪಿಐನ ಸಕ್ರಿಯ ಕಾರ್ಯಕರ್ತರಾಗಿದ್ದರು. ಅಪಘಾತಕ್ಕೆ ಕಾರಣವಾದ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
01/01/2025 01:44 pm