ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು : ಸೌರಶಕ್ತಿ ಮೂಲಕ ಹಗಲಿನಲ್ಲಿ ರೈತರಿಗೆ ವಿದ್ಯುತ್ ಪೂರೈಕೆ - ಸಚಿವ ಕೆ.ಜೆ. ಜಾರ್ಜ್

ತುಮಕೂರು

ರಾಜ್ಯದಲ್ಲಿ ಕೃಷಿ ಕ್ಷೇತ್ರವನ್ನು ಸಬಲೀಕರಣಗೊಳಿಸುವ ಸಲುವಾಗಿ ಸೌರಶಕ್ತಿ ಮೂಲಕ ಹಗಲಿನಲ್ಲಿ ರೈತರಿಗೆ ವಿದ್ಯುತ್ ಪೂರೈಕೆ ಮಾಡಲು ಯೋಜಿಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.

ಜಿಲ್ಲೆಯ ಶಿರಾ ತಾಲ್ಲೂಕು ಚಂಗಾವರ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿ ಪಿಎಂ ಕುಸುಮ್ ಘಟಕ ಸಿ ಯೋಜನೆಯಡಿ ನಿರ್ಮಿಸುತ್ತಿರುವ ೨.೪ ಮೆಗಾ ವ್ಯಾಟ್ ಸಾಮರ್ಥ್ಯದ ಸೋಲಾರ್ ಪ್ಲಾಂಟ್ ಅಳವಡಿಕೆ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದ ಅವರು, ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅನುವಾಗುವಂತೆ ತಡೆರಹಿತ ಸುಸ್ಥಿರ ವಿದ್ಯುತ್ ಸರಬರಾಜು ಮಾಡಲು ಈ ಸೋಲಾರ್ ಪ್ಲಾಂಟ್‌ಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯ ಶಿರಾ ತಾಲ್ಲೂಕಿನ ಚಂಗಾವರದಲ್ಲಿ ನಿರ್ಮಿಸಿರುವ ಸೋಲಾರ್ ಪ್ಲಾಂಟ್‌ನಿಂದ ೯೪೪ ಕೃಷಿ ಪಂಪ್ ಸೆಟ್‌ಗಳಿಗೆ ವಿದ್ಯುತ್ ಒದಗಿಸಲು ಸಾಧ್ಯವಾಗಲಿದೆ. ಈ ಸೋಲಾರ್ ಪ್ಲಾಂಟ್ ನಿರ್ಮಾಣಕ್ಕಾಗಿ ೧೧ ಎಕರೆ ಭೂ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಚಂಗಾವರದಲ್ಲಷ್ಟೇ ಅಲ್ಲದೆ ಶಿರಾ ತಾಲ್ಲೂಕಿನ ಚಿಕ್ಕಬಾಣಗೆರೆಯಲ್ಲಿಯೂ ೨೫ ಎಕರೆ ಭೂ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡು ೬.೫ ಮೆಗಾ ವ್ಯಾಟ್ ಸಾಮರ್ಥ್ಯದ ಸೋಲಾರ್ ಪ್ಲಾಂಟ್ ಅನ್ನು ನಿರ್ಮಿಸಲಾಗಿದೆ. ಇದರಿಂದ ೧೩೫೫ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸರಬರಾಜು ಮಾಡುವ ಯೋಜನೆ ಹೊಂದಲಾಗಿದೆ. ಮೆ|| ರಾಮ್ ತರಂಗ್ ಸೆಲ್ಯೂಷನ್ಸ್ ಪ್ರವೇಟ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಈ ಸೋಲಾರ್ ಪ್ಲಾಂಟ್‌ಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ಕೃಷಿ ಉತ್ಪಾದಕತೆ ಮತ್ತು ಗ್ರಾಮೀಣ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ಸಲುವಾಗಿ ಕುಸುಮ್ ಸಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಕುಸುಮ್ ಸಿ ಯೋಜನೆಯಡಿ ನಿರ್ಮಿಸಿರುವ ಸೌರ ಸ್ಥಾವರಗಳು ಕೃಷಿ ವಿದ್ಯುತ್ ಸರಬರಾಜಿನಲ್ಲಿ ಹೊಸ ಕ್ರಾಂತಿಯನ್ನೇ ಉಂಟು ಮಾಡಲಿದೆ. ಈ ಸೌರ ಸ್ಥಾವರಗಳು ಸಾಂಪ್ರದಾಯಕ ವಿದ್ಯುತ್ ಮೂಲಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ಗ್ರಾಮೀಣ ರೈತರನ್ನು ಸಬಲಗೊಳಿಸಲಿದೆ ಎಂದು ಹೇಳಿದರು.

ರಾಜ್ಯದಲ್ಲಿ ೩೦೦೦ ಮೆ.ವ್ಯಾ. ವಿದ್ಯುತ್ ಉತ್ಪಾದನೆ ಗುರಿಃ

ರಾಜ್ಯದಾದ್ಯಂತ ಸೋಲಾರ್ ಘಟಕಗಳನ್ನು ನಿರ್ಮಿಸಿ ೩೦೦೦ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ಮಲೆನಾಡು ಪ್ರದೇಶಗಳನ್ನು ಹೊರತುಪಡಿಸಿ ರಾಜ್ಯದ ಉಳಿದೆಲ್ಲಾ ಪ್ರದೇಶಗಳಲ್ಲಿ ಸೌರ ವಿಕಿರಣ ಶಕ್ತಿ ಉತ್ತಮವಾಗಿರುವುದರಿಂದ ಎಲ್ಲ ಜಿಲ್ಲೆಗಳಲ್ಲಿಯೂ ಸೌರ ಘಟಕಗಳನ್ನು ನಿರ್ಮಿಸಲಾಗುವುದು. ರಾಜ್ಯದಾದ್ಯಂತ ಸೌರ ಘಟಕಗಳನ್ನು ನಿರ್ಮಿಸಿ ರೈತರಿಗೆ ನಿರಂತರ ೭ ಗಂಟೆಗಳ ತಡೆರಹಿತ ವಿದ್ಯುತ್ ಅನ್ನು ಹಗಲಿನಲ್ಲಿ ಒದಗಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.

ಮೆ|| ರಾಮ್ ತರಂಗ್ ಖಾಸಗಿ ಕಂಪನಿಯು ಬೆಸ್ಕಾಂನೊAದಿಗೆ ವಿದ್ಯುತ್ ಖರೀದಿ ಒಪ್ಪಂದದ ಮೂಲಕ ಪಾಲದಾರಿಕೆಯನ್ನು ಹೊಂದಿದ್ದು, ಒಪ್ಪಂದದ ಪ್ರಕಾರ ಕಂಪನಿಯು ವಾರ್ಷಿಕವಾಗಿ ಪ್ರತೀ ಮೆಗಾ ವ್ಯಾಟ್‌ಗೆ ೧೬.೫ಲಕ್ಷ ವಿದ್ಯುತ್ ಯೂನಿಟ್‌ಗಳನ್ನು ಪೂರೈಸಲು ಬದ್ಧವಾಗಿದೆ. ಬೆಸ್ಕಾಂ ಕಂಪನಿಯು ಪ್ರತಿ ಯೂನಿಟ್‌ಗೆ ೩.೧೬ ರೂ.ನಂತೆ ವಿದ್ಯುತ್ ಖರೀದಿಸಿ ರೈತರಿಗೆ ಪೂರೈಕೆ ಮಾಡಲಿದೆ ಎಂದು ತಿಳಿಸಿದರು.

ನವದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಿರಾ ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ, ರಾಜ್ಯದಾದ್ಯಂತ ಸರ್ಕಾರವು ಕುಸುಮ್-ಸಿ ಯೋಜನೆಯ ಕಾರ್ಯಾರಂಭ ಮಾಡಿದ್ದು, ಪ್ರಾರಂಭಿಕವಾಗಿ ಶಿರಾ ತಾಲ್ಲೂಕಿನ ಚಂಗಾವರ ಹಾಗೂ ಚಿಕ್ಕಬಾಣಗೆರೆ ಗ್ರಾಮಗಳಲ್ಲಿ ಸೌರ ಘಟಕಗಳನ್ನು ನಿರ್ಮಿಸಲಾಗಿದೆ. ಇದರಿಂದ ಸ್ಥಳೀಯ ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ತಡೆ ರಹಿತ ವಿದ್ಯುತ್ ಪೂರೈಕೆ ಮಾಡಲಾಗುವುದು. ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳು ಸೌರ ಘಟಕಗಳ ಕಾರ್ಯಾರಂಭಕ್ಕೆ ಹಸಿರು ನಿಶಾನೆ ತೋರಲಿದ್ದಾರೆ ಎಂದರಲ್ಲದೆ, ಕುಸುಮ್-ಸಿ ಯೋಜನೆಯಿಂದ ಬೆಸ್ಕಾಂ ಕಂಪನಿಗೆ ವಿದ್ಯುತ್ ಖರೀದಿ ದರ ಕಡಿಮೆಯಾಗಲಿದೆ ಎಂದು ತಿಳಿಸಿದರು.

ಸಚಿವರು ನಂತರ ಸೋಲಾರ್ ಪ್ಲಾಂಟ್ ಅನ್ನು ಪರಿಶೀಲಿಸುತ್ತಾ, ಹಗಲಿನಲ್ಲಿ ಗುಣಮಟ್ಟದ ವಿದ್ಯುತ್ ಪೂರೈಕೆಯಾಗುತ್ತಿರುವ ಬಗ್ಗೆ ಸ್ಥಳೀಯ ರೈತರಿಂದ ಮಾಹಿತಿ ಪಡೆದರು. ಬಳಿಕ ಚಿಕ್ಕಬಾಣಗೆರೆ ಸೌರ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಂತೇಶ್ ಬೀಳಗಿ, ಬೆಸ್ಕಾಂ ಮುಖ್ಯ ಇಂಜಿನಿಯರ್(ಯೋಜನೆಗಳು) ರಮೇಶ್ ಗುಡಿ ಹಾಗೂ ಅಧೀಕ್ಷಕ ಇಂಜಿನಿಯರ್ ನರಸಿಂಹಮೂರ್ತಿ, ಕೆಪಿಟಿಸಿಎಲ್ ಅಧೀಕ್ಷಕ ಇಂಜಿನಿಯರ್ ಡಿ. ಶಿವಕುಮಾರ್, ಬೆಸ್ಕಾಂ ಮಧುಗಿರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಜಿ.ಜಗಧೀಶ್, ತುಮಕೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಶಾಂತ್ ಕೂಡ್ಲಿಗಿ,ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಾಂತರಾಜು ಇ., ನಗರ ಸಭೆ ಅಧ್ಯಕ್ಷ ಜೀಶಾನ್ ಮಹಮೂದ್, ರಾಮ್ ತರಂಗ್ ಖಾಸಗಿ ಕಂಪನಿಯ ಮುಖ್ಯಸ್ಥರಾದ ರವಿಶಂಕರ್, ಚಂದ್ರಶೇಖರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

30/12/2024 05:36 pm

Cinque Terre

212.44 K

Cinque Terre

0

ಸಂಬಂಧಿತ ಸುದ್ದಿ