ಉಪ್ಪಿನಂಗಡಿ: ಬಸ್ ನಿಲ್ದಾಣದಲ್ಲಿರುವ ಸ್ಥಳೀಯ ಗ್ರಾಪಂ ಸ್ವಾಮ್ಯದ ವಾಣಿಜ್ಯ ಕಟ್ಟಡದಲ್ಲಿರುವ ಸಮತಾ ಸ್ವೀಟ್ಸ್ ಸ್ಟಾಲ್ ಎಂಬ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಅಂಗಡಿ ಸಂಪೂರ್ಣ ಸುಟ್ಟು ಹೋಗಿದೆ ರತ್ನಾಕರ ಪೈ ಎಂಬವರ ಮಾಲಕತ್ವದ ಈ ಬೇಕರಿಯಲ್ಲಿ ರಾತ್ರಿ 11:45ರ ಸುಮಾರಿಗೆ ಹೊಗೆ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಇಡೀ ಬೇಕರಿಯನ್ನು ಆವರಿಸಿದ್ದು, ಸ್ಟಾಲ್‌ನಲ್ಲಿದ್ದ ಫ್ರಿಜ್, ಸಿಹಿತಿಂಡಿಗಳು, ಕಪಾಟುಗಳು ಸುಟ್ಟು ಹೋಗಿದ್ದು ಲಕ್ಷಾಂತರ ರೂ. ನಷ್ಟ ಉಂಟಾಗಿದೆ.
ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಕಾರ್ಯಾಚರಣೆಯಿಂದ ಬೆಂಕಿಯನ್ನು ನಂದಿಸಲಾಯಿತು. ಮತ್ತು ವಾಣಿಜ್ಯ ಮಳಿಗೆಯ ಬೇರೆ ಕೊಠಡಿಗಳಿಗೆ ಬೆಂಕಿ ಪ್ರಸರಿಸುವುದನ್ನು ತಡೆಗಟ್ಟಲಾಯಿತು. ಆದಾಗ್ಯೂ ಬೆಂಕಿಯ ತೀವ್ರತೆಗೆ ಸಮೀಪದ ಮೂರ್ನಾಲ್ಕು ಅಂಗಡಿಗಳಿಗೆ ಭಾಗಶಃ ಹಾನಿಯುಂಟಾಗಿದೆ.ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ - ವ್ಯಕ್ತವಾಗಿದೆ. ಪೊಲೀಸ್ ಅಧಿಕಾರಿಗಳು, ಪಂಚಾಯತ್ ಜನಪ್ರತಿನಿಧಿಗಳು ಸೇರಿದಂತೆ ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದರೂ ಆ ಬೆಂಕಿಯನ್ನು ನಿಯಂತ್ರಿಸಲು ಯಾವುದೇ ವ್ಯವಸ್ಥೆ ಇಲ್ಲದೆ ಕಷ್ಟಕರವಾಯಿತು.
ಪರಿಸರದಲ್ಲಿ ಪದೇ ಪದೇ ವಿದ್ಯುತ್ ಅವಘಡದ ಘಟನೆಗಳು ಸಂಭವಿಸಿದ್ದರೂ ನಾಗರಿಕ ಆಡಳಿತ ವ್ಯವಸ್ಥೆ - ಯಾವುದೇ ಪೂರ್ವ ಸಿದ್ದತೆಯನ್ನು ಕೈಗೊಂಡಿಲ್ಲ ಎನ್ನುವುದು ಇಲ್ಲಿ ಸಾಬೀತಾಗುತ್ತಿದೆ. ಸ್ಥಳೀಯ ಪಂಚಾಯತ್ ಆಡಳಿತ ಈ ಹಿಂದೆ ಹಲವು ಬಾರಿ ಉಪ್ಪಿನಂಗಡಿಯಲ್ಲಿ ಅಗ್ನಿಶಾಮಕ ದಳದ ಘಟಕವನ್ನು ಸ್ಥಾಪಿಸಬೇಕೆಂದು ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗದಿರುವುದು ಜನರ ಅಸಮಾಧಾನಕ್ಕೆ ಕಾರಣವಾಯಿತು. ಪೊಲೀಸ್ ಇಲಾಖೆಯಲ್ಲಿಯಾಗಲಿ, ಗೃಹರಕ್ಷಕ ಪಡೆಯಲ್ಲಾಗಲಿ ಅಗ್ನಿ ಅನಾಹುತವನ್ನು ತಡೆಗಟ್ಟಲು ಬೇಕಾದ ಯಾವುದೇ ಪರಿಕರಗಳು ಇಲ್ಲದಿರುವುದರಿಂದ ದೊಡ್ಡ ಮಟ್ಟದ ಅಗ್ನಿ ಅನಾಹುತಗಳಿಗೆ ದೂರದ ಬೆಳ್ತಂಗಡಿ ಅಥವಾ ಪುತ್ತೂರಿನ ಅಗ್ನಿಶಾಮಕ ದಳದ ಮೊರೆ ಹೋಗಬೇಕಿದೆ.
Kshetra Samachara
28/12/2024 06:22 pm