ಉಡುಪಿ: ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅವರಾಲು ಮಟ್ಟು ಗ್ರಾಮದ ವೃದ್ಧ ದಂಪತಿ ನೆರವಿಗೆ ಕಾಪು ತಹಶೀಲ್ದಾರ್ ಬಂದಿದ್ದಾರೆ. ಈ ದಂಪತಿ ತಮ್ಮ ಮನೆಗೆ ತಲುಪಲು ಏಕೈಕ ದಾರಿಯಾಗಿರುವ ಶಿಥಿಲಗೊಂಡ ಕಾಲು ಸಂಕವನ್ನೇ ಅವಲಂಬಿಸಿದ್ದಾರೆ. ಇವರ ಈ ದುಸ್ಥಿತಿಯನ್ನು ವೀಕ್ಷಿಸಿ ತಹಶಿಲ್ದಾರ್ ಪ್ರತಿಭಾ ಹೊಸ ಸುರಕ್ಷಿತ ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ. ಪ್ರತಿದಿನ ಈ ವೃದ್ಧ ದಂಪತಿ ತಮ್ಮ ದಿನನಿತ್ಯದ ಕೆಲಸಗಳಿಗೆ ಹೊರಗೆ ಬರಬೇಕೆಂದರೆ ಈ ಶಿಥಿಲ ಕಾಲು ಸಂಕದ ಮೇಲೆಯೇ ಬರಬೇಕು.
ಅಲ್ಲಾಡುತ್ತಾ ಇನ್ನೇನು ಮುರಿದು ಬೀಳುತ್ತದೆಯೇನೋ ಎನ್ನುವಂತಿರುವ ಈ ಮರದ ಸಣ್ಣ ಹಲಗೆಯ ಮೇಲೆಯೇ ವಸಂತಿ (70) ಭೋಜ ಸಾಲ್ಯಾನ್ (74 ) ಅವರು ನಡೆದಾಡಬೇಕಾದ ಪರಿಸ್ಥಿತಿ ಇದೆ. ದಿನಸಿ ತರಲು, ಹೊರಗಿನ ಜನರನ್ನು ಭೇಟಿ ಮಾಡಲು, ಪೇಟೆ ಬೀದಿಗೆ ಬರಲು, ಇನ್ಯಾವುದೇ ಕೆಲಸಕ್ಕೂ ಈ ಬೀಳುವಂತಿರುವ ಹಲಗೆಯ ಮೇಲೆಯೇ ಜೀವ ಕೈಲಿ ಹಿಡಿದುಕೊಂಡು ಹೋಗಬೇಕು. ಈ ಪರಿಸ್ಥಿತಿ ಗಮನಿಸಿದ ತಹಶೀಲ್ದಾರ್ ಸ್ವತಃ ಸ್ಥಳಕ್ಕೆ ಆಗಮಿಸಿ ಈ ಹಲಗೆಯ ಮೇಲೆ ನಡೆದಿದ್ದಾರೆ. ನಿಜಕ್ಕೂ ನನಗೇ ಭಯವಾಯಿತು ಎಂದಿದ್ದಾರೆ.ವೃದ್ಧರಿಗೆ ಓಡಾಡಲು, ಸುಭದ್ರ ಸೇತುವೆ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಸಂಬಂಧಪಟ್ಟ ಇಲಾಖೆ ಮತ್ತು ದಾನಿಗಳ ಸಹಕಾರದಿಂದ ಇದನ್ನು ಸಾಧ್ಯವಾಗಿಸಲು ಪ್ರಯತ್ನಿಸುತ್ತೇನೆ ಎಂದು ತಹಶೀಲ್ದಾರ್ ಭರವಸೆ ನೀಡಿದ್ದಾರೆ.
Kshetra Samachara
28/12/2024 03:54 pm