ಮಂಗಳೂರು : ನಗರಕ್ಕೆ 24×7 ಕುಡಿಯುವ ನೀರು ಒದಗಿಸುವುದಕ್ಕಾಗಿ ಜಲಸಿರಿ ಯೋಜನೆ ಜಾರಿಗೊಳಿಸಲಾಗಿದೆ. ಆದರೆ ಯೋಜನೆಯ ಅವ್ಯವಸ್ಥೆಯಿಂದ ಜಲಸಿರಿಯು ಮಂಗಳೂರು ನಗರಿಗೆ ಕಂಟಕವಾಗಿ ಪರಿಣಮಿಸಿದೆ. ಜಲಸಿರಿ ಯೋಜನೆಯನ್ನು ಗುತ್ತಿಗೆ ಪಡೆದ ಸಂಸ್ಥೆಯು ರಸ್ತೆ ಅಗೆಯುವುದರಲ್ಲೇ ಬ್ಯುಸಿಯಾಗಿರುವುದರಿಂದ ಕಾಮಗಾರಿ ಆರಂಭವಾಗಿ ಬರೋಬ್ಬರಿ ಐದು ವರ್ಷವಾದರೂ ಯಾವ ವಾರ್ಡ್‌ಗೂ ಈವರೆಗೆ ನೀರು ಪೂರೈಕೆಯಾಗಿಲ್ಲ.
ಹೌದು..ದಿನದ 24ಗಂಟೆಯೂ ಕುಡಿಯುವ ನೀರು ಒದಗಿಸಬೇಕೆಂಬ ಉದ್ದೇಶಕ್ಕೆ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ಜಲಸಿರಿ ಯೋಜನೆಯನ್ನು ಕೇಂದ್ರ, ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಮಂಗಳೂರು ಮನಪಾ ವ್ಯಾಪ್ತಿಯಲ್ಲೂ 2019ರಲ್ಲಿ ಈ ಯೋಜನೆ ಜಾರಿಗೊಂಡಿದೆ. ಆದರೆ ಯೋಜನೆ ಜಾರಿಯಾಗಿ 5ವರ್ಷವಾದರೂ ಗುಂಡಿ ಅಗೆಯೋದರಿಂದ ಗುತ್ತಿಗೆ ಸಂಸ್ಥೆ ಮುಂದೆ ಹೋಗುತ್ತಿಲ್ಲ.
ಜೊತೆಗೆ ನಗರದ ಅಲ್ಲಲ್ಲಿ ಅಗೆದ ರಸ್ತೆಯನ್ನು ಸರಿಯಾಗಿ ಮುಚ್ಚದೇ ಅರ್ಧಕ್ಕೆ ಹೋಗುತ್ತಿದೆ. ಪರಿಣಾಮ ವಾಹನ ಸವಾರರು ನಿತ್ಯ ಪರದಾಡುವಂತಾಗಿದೆ.
ಎರಡೆರಡು ಸಲ ಕಾಮಗಾರಿಯ ಗಡುವನ್ನು ವಿಸ್ತರಣೆ ಮಾಡಿದರೂ ಕಾಮಗಾರಿ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ. ಮಂಗಳೂರು ಮನಪಾ ವ್ಯಾಪ್ತಿಯಲ್ಲಿ ಒಟ್ಟು 792.4 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ನಡೆಯುತ್ತಿದೆ. ಕಾಮಗಾರಿಯ ಗುತ್ತಿಗೆಯನ್ನು ಸೂಯೆಜ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ವಹಿಸಿಕೊಂಡಿದೆ.
ಯೋಜನೆ ಹಳ್ಳ ಹಿಡಿದಿರುವುದಕ್ಕೆ ನಗರದ ಮೇರಿಹಿಲ್‌ನಲ್ಲಿ ರಸ್ತೆಬದಿ ಇಡಲಾದ ಕೊಳವೆ ಪೈಪ್‌ಗಳೇ ಸಾಕ್ಷಿಯಾಗಿದೆ. ಪೈಪ್‌ಗಳ ಡಂಪ್ ಮಾಡಿರುವ ಜಾಗದಲ್ಲಿ ಗಿಡಗಂಟಿಗಳು ಬೆಳೆದಿದೆ.
ಪ್ರತಿ ವಾರ್ಡ್‌ನಲ್ಲೂ ಯೋಜನೆಯಿಂದ ಸಮಸ್ಯೆಗಳು ಉದ್ಬವಿಸಿದ್ದು, ಆಡಳಿತ ಪಕ್ಷ ಬಿಜೆಪಿಯ ಸದಸ್ಯರು ಸಹ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 24 ಗಂಟೆ ನೀರು ಕೊಡಯವುದುಬೇಡ. ಕನಿಷ್ಠ ಪಕ್ಷ 3 ಗಂಟೆಗಳಾದರೂ ವ್ಯವಸ್ಥಿತವಾಗಿ ನೀರು ಸರಬರಾಜು ಮಾಡಿ ಎಂದು ಬಿನ್ನವಿಸುತ್ತಿದ್ದಾರೆ. ಒಟ್ಟಿನಲ್ಲಿ ಜಲಸಿರಿ ಯೋಜನೆ ಮಂಗಳೂರಿಗೆ ಮಾರಕವಾಗಿರುವುದಂತೂ ಸುಳ್ಳಲ್ಲ.
Kshetra Samachara
27/12/2024 08:00 pm