ಮಂಡ್ಯ: ಹೀಗೆ ಕಾಗದದ ಪತ್ರಗಳನ್ನ ಹಿಡಿದುಕೊಂಡು ಕಛೇರಿಗಳಿಗೆ ಅಲೆಯುತ್ತಿರುವ ಈ ತಾಯಿ ಮಕ್ಕಳ ಕಥೆ ಕೇಳಿದ್ರೆ ನಿಮ್ಮ ಕರುಳು ಚುರುಕ್ ಅನ್ನಿಸದೇ ಇರಲ್ಲ. ಇವರು ಮಂಡ್ಯ ಜಿಲ್ಲಾಧಿಕಾರಿಗಳಿಂದ ಹಿಡಿದು ಎಲ್ಲಾ ಅಧಿಕಾರಿಗಳ ಕಛೇರಿಗೆ ಅಲೆದು ಸಾಕಾಗಿದ್ದಾರೆ. ಆದ್ರೆ ಇವರಿಗೆ ನ್ಯಾಯ ಕೊಡಿಸುವಲ್ಲಿ ಮಾತ್ರ ಜಿಲ್ಲಾಡಳಿತ ವಿಫಲವಾಗಿದೆ.
ಇವರು ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಆತಗೂರು ಹೋಬಳಿ ತಿಪ್ಪೂರು ಗ್ರಾಮದವರು. ಈಕೆ ಹೆಸರು ಮಹಾಲಕ್ಷ್ಮಿ. ಇವರ ಪತಿ ಟಿ.ಸಿ.ರಾಜಣ್ಣ ಗ್ರಾಮದಲ್ಲಿ ಮೋಟರ್ ರಿವೈಂಡಿಂಗ್ ಕೆಲಸ ಮಾಡಿ ಕೊಂಡು ಜೀವನ ಸಾಗಿಸುತ್ತಿದ್ದರು.
ಒಂದು ದಿನ ಅನಾರೋಗ್ಯದ ಕಾರಣ ಮನೆಯಲ್ಲಿ ಮಲಗಿದ್ದ ರಾಜಣ್ಣನನ್ನ ಇದೇ ಗ್ರಾಮದ ಟಿ.ಎಲ್.ಸ್ವಾಮಿ ಎಂಬುವ ವ್ಯಕ್ತಿ ಬಂದು ತಮ್ಮ ತೋಟದ ಬಳಿ ಇರುವ ಟ್ರಾನ್ಸ್ ಫಾರ್ಮರ್ ಕೆಟ್ಟಿದೆ. ರಿಪೇರಿ ಮಾಡಿಕೊಡು ಬಾ ಅಂತ ಕರೆದ್ರು. ನನಗೆ ಟ್ರಾನ್ಸ್ ಫಾರ್ಮರ್ ಬಗ್ಗೆ ಗೊತ್ತಿಲ್ಲ, ಜೊತೆಗೆ ನನಗೆ ಅನಾರೋಗ್ಯ ಇದೆ ಬರಲು ಸಾಧ್ಯವಿಲ್ಲ ಅಂತ ಹೇಳಿದ್ರೂ ಬಿಡದೇ ಬಲವಂತವಾಗಿ ಕರೆದು ಕೊಂಡು ಹೋಗಿ ಹಿಂಸೆ ಮಾಡಿ ಟ್ರಾನ್ಸ್ ಫಾರ್ಮರ್ ಇದ್ದ ವಿದ್ಯುತ್ ಕಂಬ ಏರಿಸಿ ಬಿಟ್ರು. ಅದರ ಬಗ್ಗೆ ಏನೂ ಅರಿಯದ ಮತ್ತು ಯಾವುದೇ ಸುರಕ್ಷತಾ ಸಾಧನಗಳನ್ನ ಬಳಸದ ರಾಜಣ್ಣ ಹತ್ತುತ್ತಿದ್ದಂತೆ ವಿದ್ಯುತ್ ಪ್ರವಹಿಸಿ ಕೆಳಗೆ ಬಿದ್ದು ಕೈಕಾಲು ಸುಟ್ಟು ಕೊಂಡು ಒದ್ದಾಡ ತೊಡಗಿದಾಗ ಮನೆಗೆ ವಿಷಯ ತಿಳಿಸಿದರು. ಸ್ವಾಮಿ ಮತ್ತವರ ಸಂಬಂಧಿಕರು ಕೂಡಲೇ ಮೈಸೂರು ಆಸ್ಪತ್ರೆಗೆ ದಾಖಲಿಸಿದ್ರೂ, ಪ್ರಯೋಜನವಾಗದೇ ರಾಜಣ್ಣ ಸಾವನ್ನಪ್ಪಿದ್ರು. ಸದ್ಯ ರಾಜಣ್ಣ ಕುಟುಂಬ ಮದ್ದೂರು ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ರು.
ಆದರೆ ಇದೊಂದು ಅಸಹಜ ಸಾವು ಅಂತಷ್ಟೇ ದೂರು ದಾಖಲಿಸಿಕೊಂಡ ಮದ್ದೂರು ಪೊಲೀಸರು ಸಾವನ್ನಪ್ಪಿ ಒಂದು ವರ್ಷವಾದ್ರೂ ಸಾವಿಗೆ ಕಾರಣರಾದವರ ವಿರುದ್ಧ ಎಫ್ ಐ ಆರ್ ಹಾಕಿಲ್ಲ. ಮನೆಗೆ ಆಧಾರವಾಗಿದ್ದ ಯಜಮಾನನನ್ನ ಕಳೆದುಕೊಂಡು ಮೂರು ಜನ ಹೆಣ್ಣು ಮಕ್ಕಳನ್ನ ಕಟ್ಟಿಕೊಂಡು, ಸಾಲ ಸೋಲ ಮಾಡಿಕೊಂಡಿದ್ದು ಅನಾರೋಗ್ಯದಿಂದ ಬಳಲುತ್ತಾ ಜೀವನ ದೂಡುತ್ತಿರುವ ಈ ಮಹಿಳೆ ಮತ್ತು ಮೂರು ಹೆಣ್ಣು ಮಕ್ಕಳಿಗೆ ಯಾವ ಅಧಿಕಾರಿಗಳು ನೆರವಾಗಿಲ್ಲ.
PublicNext
28/12/2024 12:53 pm