ಶಿವಮೊಗ್ಗ : ಆಕೆ ಬದುಕಿ ಬಾಳಬೇಕಿದ್ದ ವಿದ್ಯಾರ್ಥಿನಿ, ಮೊಬೈಲ್ ಮೇಲೆ ಆಕೆಗೆ ಇನ್ನಿಲ್ಲದ ಪ್ರೀತಿ, ಮೊಬೈಲ್ ಮೇಲೆ ಎಷ್ಟೇ ಪ್ರೀತಿ ಇದ್ರೂ ಓದಿನಲ್ಲೂ ಅಷ್ಟೇ ಮುಂದಿದ್ಳು ಈ ಯುವತಿ. ಮೊಬೈಲ್ ಮುಟ್ಟಬೇಡ ಎಂದು ಹೇಳಿದ್ದಕ್ಕೆ ಮನನೊಂದು 20 ರ ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಆಕೆ ಆ ಕುಟುಂಬದ ಎಲ್ಲರ ಅಚ್ಚು ಮೆಚ್ಚಿನ ಮಗಳು, ಮದುವೆಯಾಗಿ ಏಳು ವರ್ಷದ ನಂತರ ಹುಟ್ಟಿದ ಕುಟುಂಬದ ಕಣ್ಣು. ಪುಟ್ಟ ಮಗುವನ್ನು ನೆಲಕ್ಕೆ ಬಿಡದೆ ಎತ್ತಿ ಆಡಿಸಿದ್ರು, ತುಂಬು ಕುಟುಂಬದಲ್ಲಿ ಬೆಳೆದ ಬಾಲಕಿ ಕಾಲೇಜಿಗೆ ಹೋದ ನಂತರ ಆಕೆಯ ಕೈ ಸೇರಿದ ಮೊಬೈಲ್ ಮುಂದೆ ಆಕೆಯ ಬದುಕನ್ನೇ ಕಿತ್ತುಕೊಂಡಿದೆ. ಹೌದು ಮೊಬೈಲ್ ನೋಡುತ್ತಿದ್ದ ಮಗಳನ್ನು ಸಹಿಸದ ತಾಯಿ ನೀನು ಓದದೆ ಮನೆ ಕೆಲಸ ಮಾಡದೆ ಸದಾ ಮೊಬೈಲ್ ನೋಡುತ್ತಾ ಕೂರ್ತೀಯಾ, ಹೀಗೆ ಮುಂದುವರೆದ್ರೆ ಗತಿ ಏನು ಎಂದು ಬುದ್ಧಿವಾದ ಹೇಳಿದ್ದಾರೆ. ಇದಕ್ಕೆ ಹತಾಶಗೊಂಡ ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಗ್ರಾಮದ 20 ವರ್ಷದ ಧನುಶ್ರೀ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ, ಆಕೆಯನ್ನು ಬದುಕಿಸಿಕೊಳ್ಳಲು ಕುಟುಂಬಸ್ಥರು ಮೂರು ದಿನ ಆಸ್ಪತ್ರೆಯಲ್ಲಿ ಹರಸಾಹಸ ಪಟ್ಟಿದ್ದಾರೆ, ಆದರೆ ಆ ಯುವತಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾಳೆ.
ಮಲೆನಾಡಿನಲ್ಲಿ ಮಕ್ಕಳಿನಿಂದ ಹಿಡಿದು ವಯೋವೃದ್ಧರವರೆಗೆ ಮೊಬೈಲ್ ಬಳಸುವ ಗೀಳು ಹೆಚ್ಚತೊಡಗಿದೆ. ಮೊಬೈಲ್ ಕೊಡಿಸದಿದ್ದಕ್ಕೆ ಹದಿಹರೆಯದ ಮಗು ಸಾವನ್ನಪ್ಪಿದ ಉದಾಹರಣೆಯಿಂದ ಹಿಡಿದು ರೀಲ್ ನಲ್ಲಿ ಲೈಕ್ಸ್ ಸಿಗಲಿಲ್ಲ ಎಂಬ ಕಾರಣಕ್ಕೆ ಹತಾಶೆಗೊಂಡು ಸಾವನ್ನಪ್ಪಿದ ಎಷ್ಟೋ ಪ್ರಕರಣಗಳಿವೆ. ಓದಿನಲ್ಲೂ ಮುಂದಿದ್ದ ಧನುಶ್ರೀ ಅಮ್ಮನ ಮಾತಿಗೆ ಜೀವನವೇ ಬೇಡ ಎಂದು ವಿಷ ಸೇವಿಸಿದ್ದಾಳೆ. ಓದುವ ಟೈಮ್ ಲ್ಲಿ ಮೊಬೈಲ್ ಬೇಡ ಮಗಳೇ ಅಂದಿದ್ದು ನಿಜಕ್ಕೂ ಧನುಶ್ರೀ ಬಾಳಲ್ಲಿ ವಿಲನ್ ಆಗಿದೆ. ತಾಯಿ ಬೈದಿದ್ದರಿಂದ ಮನನೊಂದು ಧನುಶ್ರೀ ಕಳೆನಾಶಕ ಸೇವಿಸಿದ್ದಾಳೆ. ಕೂಡಲೇ ಆಕೆಯನ್ನು ಆಯನೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ರೂ ಧನುಶ್ರೀ ಬದುಕು ಅಂತ್ಯವಾಗಿದೆ.
ಒಟ್ಟಾರೆ, ಮೊಬೈಲ್ ಎಂಬ ವಸ್ತುವಿಗೆ ಇಡೀ ಜನ ಸಮೂಹವೇ ಮುಗಿಬಿದ್ದಿದೆ. ತಂತ್ರಜ್ಞಾನ ಬೆಳೆದಂತೆ ಸಮಸ್ಯೆ ಹೆಚ್ಚಾಗುತ್ತಿದ್ದು ಮೊಬೈಲ್ ಬಳಕೆಗಾಗಿಯೇ ಯುವತಿ ಪ್ರಾಣ ಹೋಗಿರೋದು ನಿಜಕ್ಕೂ ವಿಪರ್ಯಾಸವೇ ಸರಿ...
-ವೀರೇಶ್ ಜಿ ಹೊಸೂರ್, ಪಬ್ಲಿಕ್ ನೆಕ್ಸ್ಟ್, ಶಿವಮೊಗ್ಗ
PublicNext
26/12/2024 07:06 pm