ಮೆಲ್ಬೋರ್ನ್ : ಮೆಲ್ಬೋರ್ನ್ನಲ್ಲಿನ ಭಾರತ-ಆಸ್ಟ್ರೇಲಿಯಾ ನಡುವಣ 4ನೇ ಟೆಸ್ಟ್ ಪಂದ್ಯದ ಮೊದಲ ದಿನವೇ ಕಾವೇರಿದೆ. ಅದು ಕೂಡ ಆಟಗಾರರ ನಡುವಿನ ಕಿರಿಕ್ ಇದೀಗ ಸಖತ್ ವೈರಲ್ ಆಗುತ್ತಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
ಅದರಂತೆ ಮೊದಲ ಇನಿಂಗ್ಸ್ ಶುರು ಮಾಡಿರುವ ಆಸ್ಟ್ರೇಲಿಯಾ ತಂಡಕ್ಕೆ ಯುವ ದಾಂಡಿಗ ಸ್ಯಾಮ್ ಕೊನ್ಸ್ಟಾಸ್ ಸ್ಪೋಟಕ ಆರಂಭ ಒದಗಿಸಿದ್ದರು.
ಸ್ಯಾಮ್ ಕೊನ್ಸ್ಟಾಸ್ ಅಬ್ಬರದಿಂದಾಗಿ ಆರಂಭದಲ್ಲೇ ಟೀಮ್ ಇಂಡಿಯಾ ಬೌಲರ್ಗಳು ಹೈರಾಣರಾದರು. ಇದರ ನಡುವೆ ವಿರಾಟ್ ಕೊಹ್ಲಿ ಯುವ ದಾಂಡಿಗನನ್ನು ಕೆಣಕುವ ಕಾಯಕಕ್ಕೆ ಕೈ ಹಾಕಿದರು.
10ನೇ ಓವರ್ ಮುಗಿಯುತ್ತಿದ್ದಂತೆ ಸ್ಟ್ರೈಕ್ ಬದಲಿಸಲು ತೆರಳುತ್ತಿದ್ದ ಸ್ಯಾಮ್ ಕೊನ್ಸ್ಟಾಸ್ ಅವರ ಭುಜಕ್ಕೆ ಭುಜ ನೀಡುವ ಮೂಲಕ ವಿರಾಟ್ ಕೊಹ್ಲಿ ಕಿರಿಕ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ತಿರುಗಿ ನಿಂತ ಸ್ಯಾಮ್ ಕೊನ್ಸ್ಟಾಸ್ ಕೂಡ ಮಾತಿನ ಚಕಮಕಿಗೆ ಇಳಿದರು.
ಅಷ್ಟರಲ್ಲಿ ಉಸ್ಮಾನ್ ಖ್ವಾಜಾ ಹಾಗೂ ಅಂಪೈರ್ ಮಧ್ಯ ಪ್ರವೇಶಿಸುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಇದೀಗ ವಿರಾಟ್ ಕೊಹ್ಲಿಯ ಭುಜಬಲದ ಪರಾಕ್ರಮದ ವಿಡಿಯೋ ವೈರಲ್ ಆಗಿದ್ದು, ಕೊಹ್ಲಿಯ ನಡೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
PublicNext
26/12/2024 11:41 am