ಕುಂದಾಪುರ: ಜಮ್ಮು-ಕಾಶ್ಮೀರದ ಪೂಂಛ್ ನಲ್ಲಿ ನಡೆದ ದುರಂತದಲ್ಲಿ ಹುತಾತ್ಮರಾದ ಕುಂದಾಪುರ ಸಮೀಪದ ಬೀಜಾಡಿಯ ಅನೂಪ್ ಪೂಜಾರಿ ಪಾರ್ಥಿವ ಶರೀರ ಇಂದು ಅವರ ಹುಟ್ಟೂರಿಗೆ ತಲುಪಿದೆ.
ಅನೂಪ್ ಪೂಜಾರಿ ಅವರ ಪಾರ್ಥಿವ ಶರೀರ ಉಡುಪಿಯಿಂದ ಬೆಳಗ್ಗೆ ಬೀಜಾಡಿಗೆ ರವಾನೆ ಮಾಡಲಾಯಿತು. ತೆಕ್ಕಟ್ಟೆಯಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅನೂಪ್ ಅಂತಿಮ ಯಾತ್ರೆ ನಡೆಯಲಿದೆ. ಅಂತಿಮ ಯಾತ್ರೆಯಲ್ಲಿ ಸಾವಿರಾರು ಜನ ಭಾಗಿಯಾಗುವ ನಿರೀಕ್ಷೆ ಇದೆ. ಅಂತಿಮ ಯಾತ್ರೆ ಮುಗಿಸಿ ಹುತಾತ್ಮ ಯೋಧನ ದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗುವುದು.
ಬೀಜಾಡಿ ಗ್ರಾಮದ ಮನೆಯಲ್ಲಿ ಅಂತಿಮ ವಿಧಿವಿಧಾನ ನಡೆಯಲಿದ್ದು, ಕುಟುಂಬದ ಆಪ್ತರಿಗೆ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೀಜಾಡಿಪಡು ಸರ್ಕಾರಿ ಶಾಲೆ ಮೈದಾನದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಇರಲಿದೆ. ಆಪ್ತರು, ಸಾರ್ವಜನಿಕರು, ಜನಪ್ರತಿನಿಧಿಗಳಿಗೆ ಅಂತಿಮ ನಮನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.
ಬೀಜಾಡಿ ಕಡಲ ತೀರದಲ್ಲಿ ಅನೂಪ್ ಅಂತ್ಯಸಂಸ್ಕಾರ ನಡೆಯಲಿದೆ. ಸಮುದ್ರ ತೀರದ ಸರ್ಕಾರಿ ಜಮೀನಿನಲ್ಲಿ ಇದಕ್ಕಾಗಿ ಸಿದ್ಧತೆ ಮಾಡಲಾಗಿದೆ. ಸಮುದ್ರ ತೀರದಲ್ಲಿ ಅನೂಪ್ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಲಾಗುವುದು. ಅಂತಿಮ ವಿಧಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್, ಸೇನಾ ಸಿಬ್ಬಂದಿ ಭಾಗಿಯಾಗಲಿದ್ದಾರೆ.
PublicNext
26/12/2024 10:37 am