ಕುಂದಾಪುರ: ಸರ್ಕಾರಿ ಪ್ರೌಢಶಾಲೆಯೊಂದರ ಮುಖ್ಯ ಶಿಕ್ಷಕಿ ವಿರುದ್ಧ ದೌರ್ಜನ್ಯ ನಡೆಸಲಾಗಿದೆ ಮತ್ತು ಜಾತಿನಿಂದನೆ ಮಾಡಲಾಗಿದೆ ಎಂದು ಆರೋಪಿಸಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ಸಹ ಶಿಕ್ಷಕಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ ಘಟನೆ ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ವ್ಯಾಪ್ತಿಗೆ ಬರುವ ಕುಂದಾಪುರ ತಾಲೂಕಿನ ತಲ್ಲೂರು ಗ್ರಾಮ ಪಂಚಾಯಿತಿನ ಉಪ್ಪಿನ ಕುದುರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಮಾಲತಿ ಎಂಬುವರೇ ಪೊಲೀಸ್ ಠಾಣೆಗೆ ಜಾತಿನಿಂದನೆ ದೂರು ನೀಡಿದ್ದು, ಅದೇ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷ ಉಮೇಶ್ ಹಾಗೂ ಸಹ ಶಿಕ್ಷಕಿ ನಂದ ಎನ್ನುವವರ ವಿರುದ್ಧ ಠಾಣೆಯಲ್ಲಿ ದಾಖಲಾಗಿದೆ.
ಮಾಲತಿ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು ಉಪ್ಪಿನಕುದ್ರು ಸರಕಾರಿ ಪ್ರೌಡಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿದ್ದಾರೆ. ಅವರು ಆಯಾ ಶಾಲೆಯಲ್ಲಿ ಮುಂದುವರಿಯಬಾರದೆಂಬ ದುರುದ್ದೇಶದಿಂದ ಆರೋಪಿಗಳಾದ ಎಸ್ ಡಿ ಎಂ ಸಿ ಅಧ್ಯಕ್ಷ ಉಮೇಶ್ ಅವರು ನವೆಂಬರ್ 14ರಂದು ಸಂಜೆ 4 ಗಂಟೆಗೆ ಸಭೆ ಕರೆದು ಮುಖ್ಯ ಶಿಕ್ಷಕಿಯನ್ನು ದುರುದ್ದೇಶದಿಂದ ಬಲತ್ಕಾರದಿಂದ ಹೊರಗೆ ಕಳುಹಿಸಿದ್ದಾರೆ ಹಾಗೂ ಉದ್ದೇಶಪೂರ್ವಕವಾಗಿ ಮುಖ್ಯ ಶಿಕ್ಷಕೀಯ ಮೇಲೆ ಸಾರ್ಜನಿಕವಾಗಿ ವಿದ್ಯಾರ್ಥಿಗಳ ಹಾಗೂ ಪೋಷಕರ ಎದುರು ಮಾನಹಾನಿಕರವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಅಲ್ಲದೆ ಡಿಸೆಂಬರ್ 13ರಂದು ಸಂಜೆ ಶಾಲೆಯ ಮಕ್ಕಳನ್ನು ಪ್ರಚೋದಿಸಿ ಮುಖ್ಯ ಶಿಕ್ಷಕಿಯ ವಿರುದ್ಧ ಘೋಷಣೆ ಕೂಗಿದ್ದಲ್ಲದೇ ಇನ್ನು ಮುಂದಕ್ಕೆ ಈ ಶಾಲೆಗೆ ಪ್ರವೇಶ ಮಾಡಿದರೆ ನಿಮ್ಮ ಕೈಕಾಲು ಮುರಿಯುತ್ತೇವೆ, ನಿರಂತರವಾಗಿ ಧರಣಿ ಮಾಡುತ್ತೇವೆ ಎಂದು ಬೆದರಿಕೆಯೊಡ್ಡಿದ್ದಾರೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಯಿಂದ ಒತ್ತಯಾಪೂರ್ವಕವಾಗಿ ಮಾಲತಿಯವರನ್ನು ರಜೆಯಲ್ಲಿ ಕಳುಹಿಸುವಂತೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬಳಿಕ ಡಿಸೆಂಬರ್ 23ರಂದು ಬೆಳಿಗ್ಗೆ ಶಿಕ್ಷಕಿ ಮಾಲತಿಯವರು ಶಾಲೆಗೆ ಬಂದಾಗ ಶಾಲೆಯ ಸಹಶಿಕ್ಷಕಿ ನಂದ ಅವರ ಪ್ರಚೋದನೆಯಿಂದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಮನೆಗೆ ತೆರಳಿದ್ದಾರೆ. ಅಲ್ಲದೆ ಮಾಲತಿಯವರು ತಂದಿರುವ ಆಹಾರ ಪದಾರ್ಥಗಳನ್ನು ಉಪಯೋಗಿಸದಂತೆ ಮಕ್ಕಳಿಗೆ ಬೆದರಿಕೆಯೊಡ್ಡಿದ್ದಾರೆ ಎಂದು ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
25/12/2024 07:58 pm