ಪಬ್ಲಿಕ್ ನೆಕ್ಸ್ಟ್ ಫಾಲೋವಪ್ ಸ್ಟೋರಿ....
ಹುಬ್ಬಳ್ಳಿ: ಇದು ಸಾರ್ವಜನಿಕರಿಗೆ ರಕ್ಷಣೆ ನೀಡಬೇಕಾದ ಇನ್ಸ್‌ಪೆಕ್ಟರ್‌ನೊಬ್ಬನ ಕಾಮಪುರಣದ ಕಥೆ. ಇನ್ಸ್ ಪೆಕ್ಟರ್ ನ ಕಾಮಪುರಾಣದ ಕಥೆಯನ್ನ ಪಬ್ಲಿಕ್ ನೆಕ್ಸ್ಟ್ ಬಿತ್ತರಿಸಿದ್ದೇ ತಡ ಇದೀಗ ಈ ಸುದ್ದಿಗೆ ಮಹತ್ತರ ಟ್ವಿಸ್ಟ್ ಸಿಕ್ಕಿದೆ.
ರಕ್ಷಕನೇ ಭಕ್ಷಕನಾದ ಕಥೆಗೆ ಇದೀಗ ಸ್ವತಃ ಹೋಮ್ ಮಿನಿಸ್ಟರ್‌ರಿಂದಲೇ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸೋ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರೋ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಸಿಪಿಐ ಸುರೇಶ ಯಳ್ಳೂರ ಕುರಿತಂತೆ ಗೃಹ ಸಚಿವ ಜಿ.ಪರಮೇಶ್ವರ ಪರಿಶೀಲನೆ ಮಾಡುವುದಾಗಿ ಹೇಳಿದ್ದಾರೆ.
ಹಳೇ ಹುಬ್ಬಳ್ಳಿಯ ಪೊಲೀಸ್ ಇನ್ಸ್‌ಪೆಕ್ಟರ್ ಸುರೇಶ್ ಯಳ್ಳೂರ ಅವರದ್ದೇ ಠಾಣೆಯ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡುತ್ತಿರುವುದರ ಬಗ್ಗೆ ಮೂಗರ್ಜಿ ಬರೆದಿದ್ದರು. ಅಲ್ಲದೇ ಠಾಣೆಗೆ ದೂರು ಕೊಡಲು ಬಂದ ಮಹಿಳೆಯೊಬ್ಬಳಿಗೆ ಅದೇ ರೀತಿ ಕಿರುಕುಳ ನೀಡಿದ್ದರು ಎಂದು ದೂರು ನೀಡಲಾಗಿತ್ತು. ಈ ಬಗ್ಗೆ ಕಳೆದ ಕೆಲವು ದಿನಗಳಿಂದ ನಿಮ್ಮ ಪಬ್ಲಿಕ್ ನೆಕ್ಸ್ಟ್ ವಿಸ್ತೃತ ವರದಿ ಬಿತ್ತರಿಸಿತ್ತು. ಈ ವರದಿಗೆ, ಗೃಹ ಸಚಿವ ಜಿ.ಪರಮೇಶ್ವರ್ ಅವರು ಸ್ಪಂದಿಸಿ ಕೂಡಲೇ ಇನ್ಸ್‌ಪೆಕ್ಟರ್ ಯಳ್ಳೂರ ಅವರ ಮೇಲೆ ಕೇಳಿ ಬಂದಿರುವ ಆರೋಪದ ಬಗ್ಗೆ ಮೇಲಾಧಿಕಾರಿಗಳಿಂದ ವರದಿ ತರಿಸಿಕೊಳ್ಳುವುದಾಗಿ ಹೇಳಿದ್ದಾರೆ.
ಇನ್ನು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ತಮಗೆ ಆದ ಅನ್ಯಾಯದ ಬಗ್ಗೆ ಮೂಗರ್ಜಿಯನ್ನು ಬರೆದಿದ್ದರು. ಇನ್ನೊಂದು ಪ್ರಕರಣ ಅಂದ್ರೆ ಅದೇ ಠಾಣೆಯ ವ್ಯಾಪ್ತಿಯಲ್ಲಿ ಬರುವ ಹೆಗ್ಗೇರಿ ಮಹಿಳೆಯೊಬ್ಬರು ತಮ್ಮ ಮಗಳ ಕಿಡ್ನಾಪ್ ಬಗ್ಗೆ ದೂರು ನೀಡಲು ಹೋದ್ರೆ, ಇನ್ಸ್‌ಪೆಕ್ಟರ್ ಸುರೇಶ್ ಆ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾರಂತೆ, ಇದನ್ನು ನಾವು ಹೇಳುತ್ತಿಲ್ಲ. ಸ್ವತಃ ಆ ಮಹಿಳೆ ಮಹಿಳಾ ಆಯೋಗಕ್ಕೆ, ಹೋಮ್ ಮಿನಿಸ್ಟರ್, ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದರ ಬಗ್ಗೆ ಪಬ್ಲಿಕ್ ನೆಕ್ಸ್ಟ್‌ನಲ್ಲಿ Exclusive ಆಗಿ ಸುದ್ದಿಯನ್ನು ಬಿತ್ತರಿಸಿತ್ತು. ಆದ್ರೆ ಹಿರಿಯ ಅಧಿಕಾರಿಗಳು ತನಿಖೆ ನೆಪದಲ್ಲಿ ಇನ್ಸ್‌ಪೆಕ್ಟರ್‌ಗೆ ಕ್ಲೀನ್ ಚಿಟ್ ನೀಡಿದ್ದರು. ಇದು ಪೊಲೀಸ್ ಇಲಾಖೆಯಲ್ಲಿ ಕಾಗೆ ಗುಬ್ಬಕ್ಕನ ಕಥೆ ಹೇಳಿದಂತಾಗಿತ್ತು. ಈ ಬಗ್ಗೆ ಹೋಮ್ ಮಿನಿಸ್ಟರ್ ಗಮನಕ್ಕೆ ತಂದ ಕೂಡಲೇ ಸ್ವತಃ ಅವರೇ ತನಿಖೆ ಮಾಡಿ ಮಾಹಿತಿ ಪಡೆಯಲು ಮುಂದಾಗಿದ್ದಾರೆ.
ಒಟ್ಟಿನಲ್ಲಿ ಒಬ್ಬ ಪೊಲೀಸ್ ಅಧಿಕಾರಿಯಾಗಿ ಠಾಣೆಯ ಸಿಬ್ಬಂದಿಗಳಿಗಾಗಲಿ ಸಾರ್ವಜನಿಕರಿಗಾಗಲಿ ಸೂಕ್ತ ರಕ್ಷಣೆ ನೀಡಬೇಕಾಗಿತ್ತು. ಆದ್ರೆ ರಕ್ಷಣೆ ನೀಡಬೇಕಾದ ಪೊಲೀಸ್ ಅಧಿಕಾರಿಯೇ ಈ ರೀತಿ ಕಾಮಪಿಶಾಚಿಯಂತೆ ಪೊಲೀಸ್ ಸಿಬ್ಬಂದಿ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿರುವುದು ನಿಜಕ್ಕೂ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿರೋದಂತೂ ಸತ್ಯ.
ಇನ್ನಾದ್ರೂ ಸ್ವತಃ ಗೃಹ ಸಚಿವರು ಇಂತಹ ಕೃತ್ಯ ಎಸಗಿರುವ ಪೊಲೀಸ್ ಅಧಿಕಾರಿ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕಿದೆ. ಒಂದು ವೇಳೆ ಅಧಿಕಾರಿ ವಿರುದ್ಧ ಕ್ರಮ ಜರುಗಿಸದೇ ಇದ್ದಲ್ಲಿ ಪಬ್ಲಿಕ್ ನೆಕ್ಸ್ಟ್ ನಿರಂತರ ವರದಿ ಪ್ರಸಾರ ಮಾಡೋದಂತೂ ಶತಸಿದ್ಧ ಎನ್ನುವುದು ಅಧಿಕಾರಿಗಳಿಗೆ ನೆನಪಿರಲಿ.
ಈರಣ್ಣ ವಾಲಿಕಾರ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
24/12/2024 02:35 pm